ಬೇಲೂರು: ತಾಲೂಕಿನ ವಿವಿಧೆಡೆ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ಗಳಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಅದರಂತೆ ತಾಲೂಕಿನ ಆಡಳಿತವೂ ಭದ್ಧವಾಗಿದ್ದು ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದರು.
ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ವಾಹನಗಳಲ್ಲಿ ತಿರುಗಾಡುತ್ತಿದ್ದಾರೆ. ಈ ಹಿನ್ನೆಲೆ ಸೋಮವಾರದಿಂದ ಮುಂದಿನ ಆದೇಶದ ವರೆಗೂ ಸಂಪೂರ್ಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ತುರ್ತು ಸೇವೆಗಳನ್ನು ಬಿಟ್ಟು ಅನಗತ್ಯ ವಾಹನಗಳು ರಸ್ತೆಗಿಳಿದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ ಪಿ ನಾಗೇಶ್, ಸಿಪಿಐಗಳಾದ ಶ್ರೀಕಾಂತ್, ಯೋಗೇಶ್, ಪಿಎಸ್‌ಐ ಎಸ್.ಜಿ. ಪಾಟೀಲ್ ಇದ್ದರು.