ಬೇಲೂರು: ಕೊರೊನಾ ಹಾವಳಿಯಿಂದ ಲಾಕ್‍ಡೌನ್ ಆದ ಪರಿಣಾಮ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇಲ್ಲಿನ ಆಟೋ ಚಾಲಕರಿಗೆ ತಾಲ್ಲೂಕು ಆಡಳಿತದಿಂದ ಆಹಾರದ ಕಿಟ್ ಅನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಏರ್ಪಡಿಸಿದ್ದ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಕೆ.ಎಸ್.ಲಿಂಗೇಶ್, ಇಲ್ಲಿ ಆಹಾರದ ಕಿಟ್ ಪಡೆಯುತ್ತಿರುವವರು ಯಾರೂ ಮತ್ತೊಬ್ಬರ ಬಳಿ ಕೈಯೊಡ್ಡುವವರಲ್ಲ ಆದರೆ ಇಂದಿನ ಸ್ಥಿತಿ ಆ ಹಂತಕ್ಕೆ ದೂಡಿದೆ. ಕೆಲಸವೊಂದಿದ್ದರೆ ಅವರ ಬದುಕು ಅವರು ನಡೆಸಿಕೊಂಡು ಹೋಗುತ್ತಾರೆ.
ಈಗ ನಾವು ಧಾನಿಗಳ ನೆರವಿನಿಂದ ನೀಡುತ್ತಿರುವ ಆಹಾರ ಪೂರ್ಣಪ್ರಮಾಣದ ಹೊಟ್ಟೆ ತುಂಬಿಸುವುದಿಲ್ಲ. ಕೊರೊನಾ ಇಂದ ಜನರ ಪ್ರಾಣಹಾನಿಯಾಗಿದೆ,ಜೀವನ ನಡೆಸುವುದೆ ಕಷ್ಟದ ಕೆಲಸವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ನಿಯಮಪಾಲನೆ ಮಾಡಲೇಬೇಕು.
ಕೇಂದ್ರ ಸರ್ಕಾರ 18 ವರ್ಷದೊಳಗಿನವರಿಗೆ ವ್ಯಾಕ್ಸಿನ್ ನೀಡುವ ಕೆಲಸ ಮಾಡುತ್ತಿದ್ದು ಸ್ವಲ್ಪ ಕಾಲಾವಕಾಶ ಬೇಕಿದೆ.ಒಂದೆ ದಿನ ಎಲ್ಲವೂ ಆಗುವುದಿಲ್ಲ. ಆರಂಭದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಮನವಿ ಮಾಡಿದಾಗ ಅಪಪ್ರಚಾರದಿಂದ ವ್ಯಾ ಕ್ಸಿನ್ ತೆಗೆದುಕೊಳ್ಳಲು ಯಾರೂ ಮುಂದೆಬರಲಿಲ್ಲ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಕೊರೊನಾ ಬರುವುದಿಲ್ಲ ಎಂದೇನಿಲ್ಲವಾದರೂ ಬರುವ ರೋಗವನ್ನು ಸುಲಭವಾಗಿ ದೂರವಾಗಿಸಬಹುದು
ಎಂದರು. ತಾಲ್ಲೂಕು ಆಡಳಿತ, ವೈದ್ಯಸಿಬ್ಬಂದಿ, ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಸೋಂಕಿನ ಪ್ರಮಾಣ ಕಡಿಮೆಯಾಗುವಲ್ಲಿ ಎಲ್ಲರೂ ಸಹಕರಿಸಿದ್ದಾರೆ. 6 ಕಡೆ ಸಿಸಿ ಕೇಂದ್ರಗಳನ್ನು ತೆರೆದಿದ್ದೇವೆ.ಕೋವಿಡ್ ಆಸ್ಪತ್ರೆಗಳ ಆರಂಭಿಸಿದ್ದೇವೆ. 40 ಆಕ್ಸಿಜನ್
ಪ್ಲಾಂಟ್‍ಗಳನ್ನು ಹಾಗೂ 50 ಬೆಡ್‍ಗಳನ್ನು ಮಾಡಲಾಗಿದೆ.ಇದರಲ್ಲಿ ಪ್ರಚಾರದ ಅಗತ್ಯವಿಲ್ಲ. ಅಷ್ಟು ಇಷ್ಟು ಕೊಟ್ಟು ಫೋಟೊ ತೆಗೆಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಅಗತ್ಯ ನನಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಿದ್ದೇವೆ ಎಂದು ತಿಳಿಸಿದರು.
ಸಿಪಿಐ ಯೋಗೇಶ್ ಮಾತನಾಡಿ, ಕಡ್ಡಾಯವಾಗಿ ಕುಟುಂಬದ ಸದಸ್ಯರೆಲ್ಲರೂ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಬೇಕು, ಆಟೋ ಚಾಲಕರ ಸಭೆ ನಡೆಸಬೇಕೆಂದಿದ್ದೆ. ಆಟೋ ಚಾಲಕರ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ. ನೀವು ಮಾಡುವ ವೃತ್ತಿಯ ಬಗ್ಗೆ ನಿಮಗೆ ಗೌರವವಿರಬೇಕು. ದುಶ್ಚಟದಿಂದ ದೂರವಿರಬೇಕು. ಪ್ರತಿನಿತ್ಯ ದುಡಿಯುವ ಹಣದಲ್ಲಿ ದುಶ್ಚಟಕ್ಕೆ ಹೆಚ್ಚು ವೆಚ್ಚ ಮಾಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ,ಈ ಬಗ್ಗೆ ಎಚ್ಚರವಿರಲಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ತಹಸೀಲ್ದಾರ್ ಎನ್.ವಿ.ನಟೇಶ್, ತಾ.ಪಂ.ಇಒರವಿಕುಮಾರ್, ಪುರಸಭೆಯ ಮುಖ್ಯಾಧಿಕಾರಿ ಸುಜಯ್,ತಾ.ವೈದ್ಯಾಧಿಕಾರಿ ಡಾ.ವಿಜಯ್, ಡಾ.ನರಸೇಗೌಡ, ಉಪತಹಸೀಲ್ದಾರ್ ನಾಗರಾಜ್, ಉಪನ್ಯಾಸಕ ದಿನೇಶ್, ಆಟೋ ಸಂಘದ ಲೋಕೇಶ್,ರಂಗಸ್ವಾಮಿ ಇತರರು ಇದ್ದರು.