ಜಾವಗಲ್: ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಪಟ್ಟಣದ ಹಾರನಹಳ್ಳಿ ರಸ್ತೆಯ ಎಸ್ಸಾರ್ ಪೆಟ್ರೋಲ್ ಪಂಪ್ ಬಳಿ 'ಪೆಟ್ರೋಲ್ 100 ನಾಟ್ ಔಟ್' ಘೋಷ ವಾಕ್ಯದಡಿ ಭಾನುವಾರ ವೈ.ಎನ್.ಕೃಷ್ಣೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ಮಾತನಾಡಿ ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ, ಎನ್ ಡಿಎ ಸರ್ಕಾರ ದೇಶ ಹಾಳುಮಾಡುತ್ತಿದೆ ಎಂದರು.
ಕೆಪಿಸಿಸಿ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಮಾತನಾಡಿ ಜೂನ್ 15 ರ ವರೆಗೆ ವಿವಿಧೆಡೆ ಬ್ಲಾಕ್ ಕಾಂಗ್ರೆಸ್, ಮಹಿಳಾ ಮೋರ್ಚ, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ಮಾಡಲಾಗುವುದು. ಪೆಟ್ರೋಲ್ ದರವಲ್ಲದೇ ವಿದ್ಯುತ್ ದರ 30ಪೈಸೆ ಹೆಚ್ಚು ಮಾಡಿದ್ದು ಖಂಡನೀಯ. ಇದರಿಂದ ಜನ ಸಾಮಾನ್ಯರಿಗೆ, ಮಧ್ಯಮ ವರ್ಗಕ್ಕೆ ಜೀವನ ನಡೆಸಲು ತೀವ್ರ ಸಮಸ್ಯೆಯಾಗಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಬೆಳುವಳ್ಳಿ ಮಹದೇವಪ್ಪ, ಧರ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿರೂಪಾಕ್ಷ, ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಎಸ್.ಶ್ರೀಕಂಠಯ್ಯ, ಧರ್ಮಣ್ಣ, ಲಕ್ಷ್ಮೀ ರವಿಶಂಕರ್, ಜೆ.ಕೆ.ಪ್ರಭಾಕರ್, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್, ಮಹಾಲಿಂಗಪ್ಪ, ಫೈರೋಜ್ ಗಾಂಧಿ, ಮೆಡಿಕಲ್ ಸೋಮಣ್ಣ ಇದ್ದರು.
Tags
ಅರಸೀಕೆರೆ