ಅನಂತರಾಜೇಅರಸು ಬೇಲೂರು:
ಇಲ್ಲಿನ ಯಗಚಿ ಜಲಾಶಯ ಭರ್ತಿಗೆ ಇನ್ನು ಕೇವಲ 2 ಅಡಿ ಬಾಕಿ ಉಳಿದಿದ್ದು ಮಲೆನಾಡ ಭಾಗದಲ್ಲಿ ಮಳೆ ಹೆಚ್ಚು ಬಂದರೆ ಎರಡು ದಿನದಲ್ಲಿ ಭರ್ತಿಯಾಗಲಿದೆ. 3.6 ಟಿ.ಎಂ.ಸಿ ಸಾಮಥ್ರ್ಯದ ಜಲಾಶಯಕ್ಕೆ ಮಲೆನಾಡ ಭಾಗವಾದ ತಾಲ್ಲೂಕಿನ ಗೆಂಡೇಹಳ್ಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಲವು ಭಾಗದಲ್ಲಿ ಬರುವ ಅಧಿಕ ಮಳೆಯ ನೀರು ಜಲಾಶಯಕ್ಕೆ ಹರಿದುಬರಲಿದೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಬರುತ್ತಿರುವ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಪರಿಣಾಮ ಜಲಾಶಯ ತುಂಬಲು 2 ಅಡಿ ಮಾತ್ರ ಉಳಿದಿದೆ. ಜಲಾಶಯ ಸಮುದ್ರಮಟ್ಟದಿಂದ 960 ಅಡಿ ಎತ್ತರದಲ್ಲಿದೆ. ಬೇಲೂರು, ಚಿಕ್ಕಮಗಳೂರು, ಅರಸೀಕರೆ ಪಟ್ಟಣಗಳ ಕುಡಿಯುವ ನೀರನ್ನು ಈ ಜಲಾಶಯ ನೀಡುತ್ತಿದೆ. ಜಲಾಶಯ ಭರ್ತಿಯಾದ ಸಂದರ್ಭ ನದಿಗೆ ಬಿಡುವ ಹೆಚ್ಚುವರಿ ನೀರು ಹೊರ ತಾಲ್ಲೂಕುಗಳಿಗೂ ಹರಿದು ಹೋಗಲಿದ್ದು ಅಲ್ಲಿನ ಕೃಷಿಗೂ ಉಪಯೋಗ ಆಗುತ್ತಿದೆ. ಆದರೆ ಈ ಜಲಾಶಯದ ನೀರು ನಮ್ಮ ತಾಲ್ಲೂಕಿನ ಪೂರ್ಣ ಬಯಲುಸೀಮೆ ಪ್ರದೇಶವಾದ ಹಾಗೂ ಕುಡಿಯಲು ಯೋಗ್ಯ ನೀರು ಇಲ್ಲದ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಯ ಜನರಿಗೆ ಸಂಪೂರ್ಣ ಲಭ್ಯವಾಗದಿರುವುದು ಶೋಚನೀಯ. ಇದಕ್ಕಾಗಿ ಜಲಾಶಯ ಲೋಕಾರ್ಪಣೆಗೊಂಡ ಆರಂಭದಿಂದಲೂ ನಡೆಯುತ್ತಿರುವ ಹೋರಾಟ, ಚಳವಳಿ ಎಲ್ಲವೂ ವ್ಯರ್ಥದಂತೆ ಕಂಡುಬರುತ್ತಿದೆ.
ಯಗಚಿ ಜಲಾಶಯದ ನೀರು ಬಳಸಿಕೊಂಡು ನಾಲೆಯ ಮೂಲಕ ಹರಿಯುವ ಏತ ನೀರಾವರಿ ಯೋಜನೆಯೂ ಸಹ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗಿದೆ. `ಹೇಳಿ ಕೇಳಿ ಇದು ಏತ ನೀರಾವರಿ! ಅಂದರೆ ನೀರನ್ನು ಎತ್ತುವಳಿ ಮೂಲಕ ಮತ್ತೊಂದು ಕಡೆಗೆ ಹರಿಸುವುದು.' ಇಲ್ಲಿಯೂ ತಾಂತ್ರಿಕ ಲೋಪವೊ ಏನೊ ಎಂಬಂತೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗದ ಕಾರಣ ನಾಲೆಯ ಮೂಲಕ ಈ ಯಗಚಿಯ ನೀರು ಏತ ನೀರಾವರಿ ಮೂಲಕ ಹರಿಯದೆ ಇರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಬದಲಿಯಾಗಿ ಮೈಸೂರು ಮಹಾರಾಜರ ಕಾಲದ ತಾಲ್ಲೂಕಿನ ರಣಘಟ್ಟ ಒಡ್ಡು ನಿರ್ಮಾಣದ ಸ್ಥಳದಿಂದ ಇದೆ ಯಗಚಿ ಜಲಾಶಯದ ನೀರನ್ನು ಹಳೇಬೀಡು-ಮಾದಿಹಳ್ಳಿ ಹೋಬಳಿಗೆ ಹರಿಸುವ ಬೃಹತ್ ಯೋಜನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 100 ಕೋಟಿ ರೂ.ಗಳಿಗೆ ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿದ್ದರೂ ಈವರಗೆ ಹಣ ಬಿಡುಗಡೆಯಾಗದೆ ಕಾಮಗಾರಿ ಆರಂಭಗೊಂಡಿಲ್ಲ.
ರಾಜ್ಯದ ಉಳಿದ ಜಿಲ್ಲೆ, ತಾಲ್ಲೂಕುಗಳಲ್ಲಿನ ಹಲವಾರು ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲದಿದ್ದರೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಪ್ರಮುಖ ಸಮಸ್ಯೆಯಾದ ಕುಡಿಯುವ ನೀರಿನ ಯೋಜನೆಗೆ ಅನುದಾನದ ಕೊರತೆ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿನ ಶಾಸಕರನ್ನು ಈ ಬಗ್ಗೆ ಪ್ರಶ್ನಿಸಿದರೆ, ಕೊರೊನಾ ಸಂದರ್ಭ ಬಂದಂತ ಅನುದಾನವನ್ನು ವಾಪಸ್ ಪಡೆದಿದ್ದಾರೆ, ಏನು ಮಾಡುವುದು? ಎನ್ನುತ್ತಾರೆ. ಆದರೆ ಇತರೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗೆ ಕೊರೊನಾ ಹೆಸರಿನಲ್ಲಿ ಅನುದಾನದ ಕೊರತೆ ಇಲ್ಲದಿರುವಾಗ ಬೇಲೂರು ತಾಲ್ಲೂಕಿಗಷ್ಟೇ ಈ ಸಮಸ್ಯೆ ಏಕೆ ಎಂಬುದಕ್ಕೆ ಸ್ಪಷ್ಟ ಉತ್ತರ ದೊರೆಯಬೇಕಿದೆ.
ಯಾವುದಕ್ಕೂ ಹಣವಿಲ್ಲ: ತಾಲ್ಲೂಕಿನ ಯಾವುದೆ ಪ್ರಮುಖ ಯೋಜನೆಗೆ ಅಂದರೆ, ಹೊಳೆಬೀದಿಯಲ್ಲಿ ಮಲಮೂತ್ರದ ನೀರು ನದಿಗೆ ಹರಿಯುತ್ತಿರುವ ಒಳಚರಂಡಿಯ (ಯುಜಿಡಿ) ಬಸ್ಮೀಕರಣ ಹೊಂಡ ಸ್ಥಳಾಂತರದ 43 ಕೋಟಿ ರೂ.ಯೋಜನೆ, ಮುಖ್ಯರಸ್ತೆ ಅಗಲೀಕರಣ ಯೋಜನೆ, ಹೊಳೇಬೀದಿ ಸೇತುವೆ ಹಾಗೂ ಅಭಿವೃದ್ಧಿ, ವಿಷ್ಣುಸಮುದ್ರ ದೋಣಿವಿವಾರ ಸೇರಿದಂತೆ ಕೆಲವೊಂದು ಪ್ರಮುಖ ಯೋಜನೆಗೆ ಅನುದಾನದ ಕೊರತೆ ಎಂಬಂತೆ ಬಿಂಬಿಸಲಾಗುತ್ತಿರುವ ಹಿಂದೆ ಕಾಣದ ಕೈಗಳ ಕೆಲಸವೇನಾದರೂ ಇದೆಯಾ ಎಂಬ ಶಂಕೆ ಅಭಿವೃದ್ಧಿಪರ ಇರುವ ಅನುಭಿವಿಗಳ ಅಭಿಪ್ರಾಯವಾಗಿದೆ.
ಯಗಚಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಟೀಷರ ಕಾಲದ ಕಲ್ಲು ಸೇತುವೆ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಡಿ ರಾಜ್ಯದಲ್ಲಿನ ಇತರೆ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಕೊರೊನಾ ಸಂದರ್ಭದಲ್ಲಿ ಏನೆಲ್ಲಾ, ಎಷ್ಟೆಲ್ಲಾ ಕಾಮಗಾರಿ ನಡೆದಿದೆ? ಅನುದಾನ ಎಷ್ಟು ನೀಡಿದ್ದಾರೆ? ಎಂಬುದರ ಬಗ್ಗೆ ನಮ್ಮ ಶಾಸಕರಾದ ಕೆ.ಎಸ್. ಲಿಂಗೇಶ್ ಅವರು ಅಧಿಕೃತ ಮಾಹಿತಿ ಪಡೆದು ಜಿಲ್ಲೆಗೆ ಅಥವಾ ಬೇಲೂರು ತಾಲ್ಲೂಕಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದಲ್ಲಿ ಖಡಕ್ಕಾಗಿ ಧ್ವನಿ ಎತ್ತಬೇಕಿದೆ. ಈ ಬಗ್ಗೆ ಕಾರ್ಯೋನ್ಮುಖರಾಗಬೇಕೆಂಬುದು ತಾಲ್ಲೂಕಿನ ಜನತೆಯ ಆಶಯವೂ ಆಗಿದೆ.
ಅಭಿವೃದ್ಧಿ ಪರ ಕೂಗು ಹಾಕುತ್ತಿದ್ದ ಇಲ್ಲಿನ ಸಂಘ- ಸಂಸ್ಥೆಗಳು ಸಹ ಕೊರೊನಾ ಸಂದರ್ಭದಲ್ಲಿ ಮೌನವಾಗಿದ್ದದ್ದು ಸಹಜವಾದರೂ, ತಾಲ್ಲೂಕಿನ ಅಭಿವೃದ್ಧಿ ಹಿನ್ನಲೆಯಲ್ಲಿ ಧ್ವನಿ ಎತ್ತುವುದು ಜನತೆಯ ಭಾವನೆಗಳಿಗೆ ಸ್ಪಂಧಿಸಿದಂತೆ ಆಗಲಿದೆ. ಇದು ವಿರೋಧ ಪಕ್ಷದ ಶಾಸಕರಾಗಿರುವ ಕೆ.ಎಸ್.ಲಿಂಗೇಸ್ ಅವರಿಗೆ ಬೆಂಬಲ ನೀಡಿದಂತೆ ಆಗಲಿದೆ.
ಜನತೆಯ ಈ ಎಲ್ಲಾ ಅಭಿಮತ-ಅಭಿಪ್ರಾಯ ತಾಲ್ಲೂಕಿನ ಅಭಿವೃದ್ಧಿ ಹಿನ್ನಲೆಯಲ್ಲಷ್ಟೇ ಹೊರತು, ಒಬ್ಬ ವ್ಯಕ್ತಿಯ ಅಭಿವೃದ್ಧಿಗಲ್ಲ ಎಂಬುದನ್ನು ಮನಗಂಡು ಕಾರ್ಯೋನ್ಮುಖರಾಗಬೇಕಿದೆ. ನೋಡೋಣ, ಇನ್ನೂ ಸಮಯವಿದೆಯೇನೊ.?
