ಬೆಂಗಳೂರು: ಪ್ರಸ್ತುತ `ಕನ್ನಡತಿ’ ಧಾರಾವಾಹಿ ಮೂಲಕ ಮನೆಮಾತಾಗಿರುವ ಕಿರುತೆರೆಯ ಪುಟ್ಟಗೌರಿ ರಂಜನಿ ರಾಘವನ್. ನಟನೆಯೊಂದಿಗೆ ತಮ್ಮ ಬರವಣಿಗೆಯ ಕೌಶಲ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ ರಂಜನಿ ವೆಬ್‍ಸೈಟ್‍ವೊಂದಕ್ಕೆ ಕಥೆ ಬರೆಯುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈವರೆಗೂ ರಂಜನಿಯ 7 ಕಥೆಗಳು ಪ್ರಕಟಗೊಂಡಿದ್ದು, ಸದ್ಯ ಅಭಿಮಾನಿಗಳು ಕನ್ನಡತಿಯ ಕಥೆಗೆ ಫಿದಾ ಆಗಿದ್ದಾರೆ.
ಬರಹಗಾರ್ತಿಯಾಗಿ ರಂಜನಿ ರಾಘವನ್ ನಿನ್ನೆ ಮೊದಲ ಬಾರಿಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದು, ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ರಂಜನಿ ತಮ್ಮ ಕಥೆಗಳನ್ನು ಓದಿ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.
`ನನ್ನ ಕಥೆಯನ್ನು ಜನರು ಓದುತ್ತಾರೆ, ಜನರಿಂದ ಈ ಮಟ್ಟದ ಪ್ರತಿಕ್ರಿಯೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ನನ್ನ ಬರವಣಿಗೆಯನ್ನು ಸುಧಾರಿಸಿಕೊಳ್ಳಲು ನಾನು ಕಥೆ ಬರೆಯಲು ಆರಂಭಿಸಿದೆ. ಆದರೆ ಈಗ ಪ್ರತೀ ವಾರ ಕಥೆ ಬರೆಯುತ್ತಾ ಹೋದಂತೆ ನನ್ನ ಕಥೆಗಳೇ ನನಗೆ ಸ್ಪರ್ಧೆ ನೀಡಲು ಆರಂಭಿಸಿವೆ. ನನಗೆ ಒಂದು ರೀತಿ ಜವಾಬ್ದಾರಿ ಹೆಚ್ಚಾಗಿ ಭಯ ಆಗುತ್ತಿದೆ. ಶುಕ್ರವಾರ ಬಂದ ತಕ್ಷಣ ನನಗೆ ಸಿನಿಮಾ ರಿಲೀಸ್ ಆದ ಹಾಗೆ ಭಯ ಆಗುತ್ತದೆ. ಈ ವಾರ ನನ್ನ ಕಥೆ ಜನರಿಗೆ ಇಷ್ಟವಾಯ್ತಾ, ಏನೆಲ್ಲಾ ಕಮೆಂಟ್ಸ್ ಬಂದಿದೆ ಹೀಗೆ… ಶುಕ್ರವಾರದಂದು ಅಕ್ಷರಶಃ ನಾನು ಇದನ್ನು ಬಿಟ್ಟು ಬೇರೇನನ್ನೂ ಯೋಚಿಸುವುದಿಲ್ಲ. ಇದೆಲ್ಲದಕ್ಕೂ ಜನರೇ ಸ್ಪೂರ್ತಿ. ನಾನು ಬರವಣಿಗೆ ಆರಂಭಿಸಿದ್ದು ಯಾರ ಸ್ಪೂರ್ತಿಯಿಂದಲೂ ಅಲ್ಲ. ಆದರೆ ಈಗ ಜನರು ನನ್ನ ಕಥೆಗಳಿಗೆ ನೀಡುತ್ತಿರುವ ಪ್ರತಿಕ್ರಿಯೆಗಳೇ ನನಗೆ ಕಥೆ ಬರೆಯಲು ಸ್ಪೂರ್ತಿಯಾಗಿದೆ ಎಂದಿದ್ದಾರೆ.
ತಾವು ಕಥೆ ಬರೆಯಲು ವಿಷಯಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವಿಚಾರದ ಬಗ್ಗೆ ರಂಜನಿ ತಿಳಿಸಿದ್ದಾರೆ. ನಿಜ ಜೀವನಕ್ಕೆ ಹತ್ತಿರವಾದಂತಹ, ನಮಗೆ ತಿಳಿದಿರುವ ವಿಷಯಗಳು ಜನರಿಗೆ ಇಷ್ಟವಾಗುತ್ತವೆ ಎನ್ನುವುದು ಜನರ ಕಮೆಂಟ್ ನೋಡಿ ತಿಳಿದಿದೆ. ಹಾಗಾಗಿ ಅಂತಹ ಸಣ್ಣ-ಸಣ್ಣ ವಿಷಯಗಳನ್ನೇ ಯೋಚಿಸುತ್ತಾ ಹೋಗುತ್ತಿದ್ದೇನೆ. ಇಲ್ಲಿಯವರೆಗೆ 7 ಕಥೆಗಳನ್ನು ಬರೆದಿದ್ದೇನೆ. 15 ಕಥೆ ಬರೆದು ಅಲ್ಲಿಗೆ ನಿಲ್ಲಿಸೋಣ ಅಂದುಕೊಂಡಿದ್ದೇನೆ. ಏಕೆಂದರೆ ಬರೆಯುತ್ತಾ-ಬರೆಯುತ್ತಾ ಕಥೆಯ ಗುಣಮಟ್ಟ ಕಡಿಮೆಯಾಗುತ್ತಾ ಹೋಗಬಾರದು. ಒಂದು ಸಣ್ಣ ಗ್ಯಾಪ್ ತೆಗೆದುಕೊಂಡು ನಂತರ ಬರವಣಿಗೆಯನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಕಥೆ ಬರೆಯಲು ಆರಂಭಿಸಿದ ಮೇಲೆ ನನ್ನ ಜೀವನ ಓಡುತ್ತಿರೋ ಟ್ರೈನ್‍ನಂತಾಗಿದೆ. ಬುಧವಾರದಷ್ಟರಲ್ಲಿ ಕಥೆ ಸಿದ್ಧವಾಗಬೇಕು. ಶುಕ್ರವಾರ ಆ ಕಥೆಯನ್ನು ಅಪ್ಲೋಡ್ ಮಾಡಿ, ಪ್ರತಿಕ್ರಿಯೆ ಏನಿದೆ ಎಂದು ನೋಡಬೇಕು. ಶನಿವಾರ ಮುಂದಿನ ಕಥೆ ಏನು ಎಂದು ಯೋಚಿಸುವುದು. ಭಾನುವಾರದಷ್ಟರಲ್ಲಿ ಒಂದು ಮಟ್ಟದಲ್ಲಿ ಕಥೆಯ ಡ್ರಾಫ್ಟ್ ಸಿದ್ಧವಾಗುತ್ತದೆ. ಸೋಮವಾರ-ಮಂಗಳವಾರ ಆ ಕಥೆಯನ್ನು ಸರಿಯಾಗಿ ಎಡಿಟ್ ಮಾಡುವುದು. ಬುಧವಾರ ಮತ್ತೆ ಕಥೆಯನ್ನು ಕಳುಹಿಸುವುದು. ಗುರುವಾರ ಒಂದು ದಿನ ಏನೂ ಕೆಲಸ ಇರುವುದಿಲ್ಲ. ಆದರೆ ಅಂದು ಮುಂದೆ ಯಾವ ಕಥೆ ಬರೆಯಲಿ ಎಂದು ಯೋಚಿಸುತ್ತೇನೆ. ಇದೆಲ್ಲಾ ನನಗೆ ಸಖತ್ ಮಜಾ ನೀಡುತ್ತಿದೆ. ಇದರಿಂದ ನನಗೆ ಸಮಯದ ಅಭಾವ ಉಂಟಾಗುತ್ತಿದೆ. ಅದರೂ ಒಳ್ಳೆಯ ಅನುಭವ ಸಿಗುತ್ತಿದೆ. ಸುಮ್ಮನೆ ಒಂದು ಕಥೆ ಬರೆದು ಬಿಡುವುದಕ್ಕಿಂತ ಪ್ರತೀ ವಾರ ಜನರ ಪ್ರತಿಕ್ರಿಯೆಯನ್ನು ನೋಡಿಕೊಂಡು ಕಥೆ ಮುಂದುವರಿಸುವುದು ಇಂಟರೆಸ್ಟಿಂಗ್ ಅನ್ನಿಸುತ್ತಿದೆ ಎಂದು ತಮ್ಮ ಬರವಣಿಗೆಯ ಕಥೆಯನ್ನು ಹಂಚಿಕೊಂಡಿದ್ದಾರೆ.
ಸದ್ಯ ರಂಜನಿ ರಾಘವನ್ `ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಪಾತ್ರದಲ್ಲಿ ನಟಿಸುತ್ತಿದ್ದು, ಜೊತೆಗೆ ವೆಬ್‍ಸೈಟ್‍ಗೆ ಕಥೆ ಬರೆಯುತ್ತಿದ್ದಾರೆ. `ರಾಜಹಂಸ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿರುವ ರಂಜನಿ `ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಸೇರಿ ಇನ್ನೂ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಮೇಲೆ ಬರುವ ನಿರೀಕ್ಷೆ ಇದೆ.