ಬೇಲೂರು : ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಮೋಹನಕುಮಾರ್, ಅನೇಕ ಭಾಷೆ, ಧರ್ಮ, ಜನಾಂಗ ಹೊಂದಿರುವ ಭಾರತದಲ್ಲಿ ಧರ್ಮಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಕಳೆದ ಎರಡು ವರ್ಷ ನಮ್ಮ ಸಂತೋಷವನ್ನು ಈ ಕೊರೊನಾ ಕಸಿದುಕೊಂಡಿದೆ. ಪರಿಣಾಮ ನಾವು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮರೆಯಬಾರದು. ಇದರಿಂದ ಕೊರೊನಾದಿಂದ ಹೊರಬರಬಹುದಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು ಹಾಗೂ ಶುಭಾಶಯಗಳ ಕೋರಿದರು.
ಆರಕ್ಷಕ ವೃತ್ತನಿರೀಕ್ಷಕ ಯೋಗೇಶ್ ಮಾತನಾಡಿ, ಬಕ್ರೀದ್ ಹಬ್ಬದ ವೇಳೆ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲಾಗಿದ್ದು ಕಡಿಮೆ ಅಂದರೆ 50 ಜನರು ಮಾತ್ರ ಆಯಾಯ ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷ ಕೆಳಗಿನವರು ಮನೆಯಲ್ಲೇ ಪ್ರಾರ್ಥನೆ ಮಾಡಿಕೊಳ್ಳಬೇಕು, ಮಾಸ್ಕ್, 6 ಅಡಿ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಬಳಕೆ ಮಾಡಬೇಕು, ದೇಹದ ತಾಪಮಾನವನ್ನು ಪರೀಕ್ಷೆ ನಡೆಸುವುದು ಮಾಡಬೇಕು ಹಬ್ಬ ಶಾಂತಿಯುತವಾಗಿ ಆಚರಿಸಬೇಕೆಂದು ಸೂಚಿಸಿದರು. ಇದೆ ವೇಳೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ಕೊರೊನಾ ಕಾರಣದಿಂದ ಸರ್ಕಾರದ ನಿಯಮದಂತೆ 2 ವರ್ಷ ರಂಜಾನ್ ಹಬ್ಬ ಸೇರಿದಂತೆ 2 ಹಬ್ಬಗಳನ್ನು ಸರಳವಾಗಿ ಆಚರಿಸಿದ್ದೇವೆ. ಇದೀಗ ಅನ್ ಲಾಕ್ ಆಗಿದೆ. ನಾವು ಪ್ರಾರ್ಥನೆ ವೇಳೆ ಕೊರೊನಾ ಮುಕ್ತಿ ಹೊಂದಲೆಂಬುದು ಮೊದಲ ಆಧ್ಯತೆ ಯಾಗಿದೆ. ಸರಳವಾಗಿ ಆಚರಿಸಲು ಈಗಾಗಲೇ ನಮಗೆ ಮೇಲ್ಮಟ್ಟದಿಂದ ಸೂಚನೆ ಬಂದಿದೆ. ಯಾವುದೆ ರೀತಿ ನಿಯಮ ಉಲ್ಲಂಘಿಸಿ ಆಚರಿಸುವುದಿಲ್ಲ ಎಂದು ಹೇಳಿದರು.
ಜಾಕೀರ್ ಪಾಷ ಮಾತನಾಡಿ, ಕೊರೊನಾ ಕಾರಣದಿಂದ ಹಜ್ ಯಾತ್ರೆಯನ್ನು ಕೈಬಿಡಲಾಗಿದೆ. ಹಬ್ಬವನ್ನು ಸರಳವಾಗಿ ಆಚರಣೆ ಮಾಡುವ ಮೂಲಕ ಬಡವರಿಗೆ ಸಹಾಯ ಮಾಡಬೇಕಿದೆ. ಮಸೀದಿಯಲ್ಲಿ ಹೇಗೆ ಆಚರಿಸಬೇಕೆಂಬ ಕುರಿತು ಈಗಾಗಲೇ ಮಸೀದಿ ಗುರುಗಳು ಸಲಹೆ ಸೂಚನೆ ಕೊಟ್ಟಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ಪಿಎಸೈ ಶಕುಂತಲಾ, ಶಿರಸ್ತೇದಾರ್ ಮಂಜುನಾಥ್, ಪೊಲೀಸ್ ಸಿಬ್ಬಂದಿಗಳಾದ ಹೆಚ್ಇ ವಿರೂಪಾಕ್ಷ, ಅಸೋಕ್, ಮನು, ಸ್ವಾಮಿ, ಪುಟ್ಟಸ್ವಾಮಿ, ಬಿಜಿಲಿ ಮತ್ತು ಮಸೀದಿ ಗುರುಗಳಾದ ನಯಾಜ್ ಹಾಗೂ ಪುರಸಭಾ ಸದಸ್ಯ ಪ್ರಭಾಕರ್, ಮಾಜಿ ಸದಸ್ಯ ರವೂಫ್ ಪ್ರಮುಖರಾದ ಖಾದರ್, ನವೀದ್, ವಾಜಿದ್, ಸಮದ್, ನಾಸಿರ್, ಸತ್ಯನಾರಾಯಣ ಇತರರು ಇದ್ದರು.
