ಬೇಲೂರು: ಕಳೆದ ವಾರದಿಂದ ಸುರಿದ ಧಾರಾಕಾರ ಮಳೆಯಿಂದ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶೇಷಶೆಟ್ಟಿ ಎಂಬುವರ ಮನೆ ಛಾವಣಿ ಕುಸಿದಿದ್ದು, ಮನೆಯ ಗೋಡೆಗಳು ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ. ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು.
![]() |
| ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶೇಷಶೆಟ್ಟಿ ಎಂಬುವರ ಮನೆ ಭಾರೀ ಮಳೆಯಿಂದ ಛಾವಣಿ ಕುಸಿದಿರುವ ದೃಶ್ಯ. |
ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿನ ಜನತಾ ಬೀದಿಯಲ್ಲಿ ಶೇಷಶೆಟ್ಟಿ ಎಂಬುವರು ಕೂಲಿಕೆಲಸ ಮಾಡಿಕೊಂಡು ಕಳೆದ ಹದಿನೈದು ವರ್ಷಗಳ ಹಿಂದೆ ಹಂಚಿನ ಮನೆ ನಿರ್ಮಾಣ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಸುರಿಯುವ ಭಾರೀ ಮಳೆಯಿಂದ ಶೇಷಶೆಟ್ಟಿರವರ ವಾಸ ಇರುವ ಮನೆ ಅಲ್ಪಮಟ್ಟಿನ ಬಿರುಕು ಕಾಣಿಕೊಂಡಿದ್ದು, ಸದ್ಯ ಪ್ರಸಕ್ತ ಸಾಲಿನಲ್ಲಿನ ಧಾರಾಕಾರ ಮಳೆಯ ಅರ್ಭಟಕ್ಕೆ ಮನೆಯ ಛಾವಣಿ ಕುಸಿತದಿಂದ ಗೋಡೆಗಳಲ್ಲಿ ಬಿರುಕು ಕಾಣಿಕೊಂಡು ವಾಸ ಮಾಡಲು ಯೋಗ್ಯವಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಹೆಬ್ಬಾಳು ಶೇಷಶೆಟ್ಟಿ, ನಾನು ಕಳೆದ ೧೫ ವರ್ಷಗಳ ಹಿಂದೆ ಕೂಲಿ ಕೆಲಸವನ್ನು ಮಾಡಿಕೊಂಡು, ಕುಟುಂಬ ನಿರ್ವಹಣೆ ಜೊತೆ ಕಷ್ಟಪಟ್ಟು ಮನೆಯನ್ನು ನಿರ್ಮಿಸಿದ್ದು, ಈ ಭಾರೀ ಸುರಿದ ಮಳೆಯಿಂದ ಮನೆ ಕುಸಿತವಾಗಿದೆ. ಇದ್ದರಿಂದ ನಾವುಗಳು ಬೀದಿಗೆ ಬಂದ ಬಗ್ಗೆ ಹೇಳಿದ ಅವರು ಕಳೆದ ಮೂರು ದಿನದ ಹಿಂದೆ ರಾತ್ರಿ ವೇಳೆ ಮಲಗಿರುವ ಸಂದರ್ಭದಲ್ಲಿ ವಿಪರೀತ ಮಳೆ ಬಂತು. ಆ ಸಂದರ್ಭದಲ್ಲಿ ಅಟ್ಟದ ಮೇಲೆ ಶಬ್ದ ಬಂದ ತಕ್ಷಣವೇ ಎದ್ದು ನೋಡಿದಾಗ ಮನೆಯ ಛಾವಣಿ ಸಂಪೂರ್ಣ ಕುಸಿತವಾಗಿದೆ. ಅದೃಷ್ಟ ಎಂಬಂತೆ ನಾನು ಪ್ರಾಣ ಅಪಾಯದಿಂದ ಪಾರದ ಬಗ್ಗೆ ತಿಳಿಸಿದ ಅವರು ಜನತಾ ಕಾಲೋನಿಯಲ್ಲಿನ ನಮ್ಮ ಮನೆಗೆ ಹೋಲ ಗದ್ದೆಯ ನೀರು ಬರುವ ಕಾರಣದಿಂದಲೇ ಇಲ್ಲಿನ ೨೫ ಕ್ಕೂ ಹೆಚ್ಚಿನ ವಾಸದ ಮನೆಗಳು ಇಂದಿಗೂ ಶೀತಪೀಡಿತವಾದ ಹಿನ್ನೆಲೆಯಲ್ಲಿ ಮನೆಗಳು ಕುಸಿತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಂಬಂಧಿಸಿದ ತಹಸೀಲ್ದಾರ್ ಮತ್ತು ಗ್ರಾಮ ಪಂಚಾಯತಿ ನಮಗೆ ಸೂಕ್ತ ಪರಿಹಾರ ಹಾಗೂ ಮನೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
![]() |
| Advertisement |
ಹೆಬ್ಬಾಳು ಗ್ರಾಮ ಪಂಚಾಯತಿ ಸದಸ್ಯ ಗಿರೀಶ್ ಮಾತನಾಡಿ, ಹೆಬ್ಬಾಳು ಗ್ರಾಮದಲ್ಲಿನ ಜನತಾ ಕಾಲೋನಿಯಲ್ಲಿ ೨೫ ಕ್ಕೂ ಹೆಚ್ಚಿನ ಮನೆಗಳಿವೆ. ಆದರೆ ವಿಪರೀತವಾಗಿ ಸುರಿದ ಮಳೆಯ ವೇಳೆ ನೀರು ರಭಸವಾಗಿ ಹರಿದು ಮನೆಗಳ ಬಳಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಲೇ ಗ್ರಾಮ ಸುತ್ತ ದೊಡ್ಡ ಮಟ್ಟದ ಕಾಲುವೆ ನಿರ್ಮಿಸಿ, ಕಾಲುವೆ ನೀರು ಕೆರೆ ಕಟ್ಟೆಗಳಿಗೆ ಹೊಗುವ ರೀತಿಯಲ್ಲಿ ಯೋಜನೆ ರೂಪಿಸಿ, ಸಂಬಂಧಿಸಿದ ಇಲಾಖೆ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ.ಸದ್ಯದಲ್ಲಿ ಕಾಮಗಾರಿ ನಡೆಸುವ ಭರವಸೆ ನೀಡಿದ ಅವರು ಶೇಷಶೆಟ್ಟಿ ಎಂಬುವರ ಮನೆ ಭಾರೀ ಮಳೆಯಿಂದ ಕುಸಿತವಾಗಿ ವಾಸಕ್ಕೆ ಯೋಗ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಖುದ್ದು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಯಿಸಿದರು.
![]() |
| Advertisement |
ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನತಾ ಕಾಲೋನಿಯ ಎಲ್ಲಾ ಮನೆಗಳು ಸಂಪೂರ್ಣವಾಗಿ ಶೀತಪೀಡಿವಾಗಿದ್ದು. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿ ಆಡಳಿತ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದರು.



