ಬೇಲೂರು ತಾಲ್ಲೂಕಿನಲ್ಲಿ ೨ ಸಾವಿರ ಕೆರೆಕಟ್ಟೆ.
ಪ್ರತಿ ವಾರ ನಾಲ್ಕು ಕೆರೆಗಳ ಸರ್ವೆ.
ಒತ್ತುವರಿ ಸ್ಥಳದಲ್ಲೇ ತೆರವು- ಶಿಸ್ತು ಕ್ರಮ.
ಪುರಾತನ ದೇಗುಲಗಳಿಗೆ ಕಾಯಕಲ್ಪ.
:-ಬೇಲೂರು ತಾಲ್ಲೂಕಿನ ಬಹುತೇಕ ಕೆರೆಕಟ್ಟೆಗಳ ಒತ್ತುವರಿಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಕಾರಣದಿಂದಾಗಿ ಮತ್ತು ಕೆರೆ-ಕಟ್ಟೆಗಳ ಸಂರಕ್ಷಣೆ ಮಾಡಬೇಕು ಎಂಬ ಸರ್ಕಾರದ ಆದೇಶದಂತೆ ಕೆರೆ-ಕಟ್ಟೆಗಳ ಒತ್ತುವರಿ ಬಗ್ಗೆ ಸರ್ವೆ ನಡೆಸಿ, ಸ್ಥಳದಲ್ಲೇ ತೆರವು ಕಾರ್ಯಾಚರಣೆ ನಡೆಸಲು ತಾಲ್ಲೂಕು ಆಡಳಿತ ಬದ್ಧವಾಗಿದೆ ಎಂದು ಬೇಲೂರು ತಹಸೀಲ್ದಾರ್ ಮೋಹನ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಪತ್ರಿಕೆಯೊಂದಿಗೆ ವಿಶೇಷವಾಗಿ ಮಾತನಾಡಿದ ಅವರು ಬೇಲೂರು ತಾಲ್ಲೂಕಿನಲ್ಲಿ ಸದ್ಯ ೨ ಸಾವಿರಕ್ಕೂ ಅಧಿಕ ಕೆರೆ-ಕಟ್ಟೆಗಳಿವೆ ಎಂಬ ಬಗ್ಗೆ ವರದಿಯಾಗಿದೆ. ಬಹುತೇಕ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಈಗಾಗಲೇ ಸಾರ್ವಜನಿಕರು ಮತ್ತು ಹಲವು ಸಂಘ- ಸಂಸ್ಥೆಗಳು ತೆರವು ಕಾರ್ಯಚರಣೆ ನಡೆಸಬೇಕು ಎಂದು ವ್ಯಾಪಕವಾಗಿ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಪ್ರತಿ ವಾರದ ಒಂದು ದಿನ ನಾಲ್ಕು ಕೆರೆ-ಕಟ್ಟೆಗಳ ಸರ್ವೆ ನಡೆಸಲು ನಿರ್ಧಾರ ಮಾಡಲಾಗಿದೆ.ಐದು ಹೋಬಳಿಗಳಲ್ಲಿ ಕೂಡ ಸರ್ವೆ ಕಾರ್ಯಕ್ಕೆ ಈಗಾಗಲೇ ಸಂಬಂಧಿಸಿದ ಸರ್ವೆ ಅಧಿಕಾರಿಗಳನ್ನು ನೇಮಿಸಿದ್ದು, ಪ್ರತಿ ವಾರ ಜೇಷ್ಠತೆ ಆಧಾರದ ಮೇಲೆ ಕೆರೆ ಕಟ್ಟಡಗಳನ್ನು ಸರ್ವೆ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ತಿಂಗಳು ೧೪ ಕೆರೆಗಳನ್ನು ಸರ್ವೆ ನಡೆಸಿದ ಬಳಿಕ ಸ್ಥಳದಲ್ಲೇ ತೆರವು ನಡೆಸಲಾಗುತ್ತದೆ. ಅಲ್ಲದೆ ಒತ್ತುವರಿಗೆ ತೊಂದರೆ ನೀಡಿದವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲು ತಾಲ್ಲೂಕು ಆಡಳಿತ ಯಾವ ಕಾರಣಕ್ಕೂ ಮೀನಾ ಮೇಷ ಎಣಿಸುವ ಪ್ರಶ್ನೆಯಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನಲ್ಲಿ ಈಗಾಗಲೇ ರಾಜ ಮಹಾರಾಜರ ಕಾಲದ ೯೦೦ ವರ್ಷದ ಕೆರೆಗಳಾದ ಹಳೇಬೀಡು ದ್ವಾರಸಮುದ್ರ, ಬೇಲೂರಿನ ವಿಷ್ಣು ಸಮುದ್ರ ಕೆರೆಗಳು ಇಂದಿಗೂ ತಮ್ಮದೆಯಾದ ಇತಿಹಾಸವನ್ನು ಸಾರುತ್ತಿದೆ.ಇಂತಹ ಕೆರೆಗಳನ್ನು ಸಂರಕ್ಷಣೆ ಮಾಡಲು ಸಾರ್ವಜನಿಕರು ಮುಂದಾಗಬೇಕಿದೆ. ವಿಶೇಷವಾಗಿ ಪುರಾತನ ಕಲ್ಯಾಣಿಗಳು ಮತ್ತು ಎಲೆಮರೆಯ ಪುರಾತನ ದೇಗುಲಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಸಂಘ- ಸಂಸ್ಥೆಗಳು ನಮ್ಮದೊಂದಿಗೆ ಪೂರ್ಣ ಬೆಂಬಲ ನೀಡಿದೆ. ಜನರು ಇಂತಹ ಐತಿಹಾಸಿಕ ಸ್ಮಾರಕ ಮತ್ತು ದೇಗುಲ ಹಾಗೂ ಕಲ್ಯಾಣಿಗಳ ಸಂರಕ್ಷಣೆಗೆ ಸರ್ವರೂ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.
:- ಬೇಲೂರು ತಾಲ್ಲೂಕಿನಲ್ಲಿ ಸದ್ಯ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದೆ. ಅದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳಬೇಕಿದೆ. ಲಾಕ್ ಡೌನ್ ತೆರವು ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ನಮಗೆ ಇನ್ನೂ ಬಂದಿಲ್ಲ ಎಂದರು.ಮೋಹನ್ ಕುಮಾರ್. ತಹಸೀಲ್ದಾರ್ ಬೇಲೂರು.
ಸುದ್ದಿ ಕೃಪೆ : ಜೇನುಗಿರಿ ಪತ್ರಿಕೆಯ ಫೇಸ್ ಬುಕ್ ನಲ್ಲಿ ದೊರೆತದ್ದು.