ಸೋಮವಾರದಿಂದ 9 ಮತ್ತು 10ನೇ ತರಗತಿಗಳಿಗೆ ಭೌತಿಕ ಬೋಧನೆ ಆರಂಭ....

 ಹಾಸನ: ಕೊರೊನಾ ಸೋಂಕು ತಗ್ಗಿದ ಪರಿಣಾಮ ಜಿಲ್ಲೆಯಲ್ಲಿ ಆ.30ರಿಂದ 9 ಮತ್ತು 10ನೇ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಕಳುಹಿಸಬೇಕು.

ಏಳು ದಿನಗಳ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1.5 ರಷ್ಟಿದ್ದು, ರಾಜ್ಯದಲ್ಲಿ ಹಾಸನ ನಾಲ್ಕನೇ ಸ್ಥಾನದಲ್ಲಿದೆ. 

ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50 ರ ವರೆಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭೌತಿಕ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೂ 2450 ಸರ್ಕಾರಿ, 616 ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿವೆ. ಸುಮಾರು 12 ಸಾವಿರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಶಿಕ್ಷಕರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

 ಕೋವಿಡ್ ಲಾಕ್ಡೌನ್ ಪರಿಣಾಮ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾದವರ ಸಂಖ್ಯೆಯೇ ಶೇಕಡಾ 8ರಷ್ಟಿದೆ. ಸರ್ಕಾರಿ ಶಾಲೆ ಒಂದನೇ ತರಗತಿ ಒಂದರಲ್ಲೇ 12,044 ಮಕ್ಕಳು ದಾಖಲಾಗಿದ್ದಾರೆ.

 2020–21ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಹಾಗೂ ಅನುದಾನ ರಹಿತ ಶಾಲೆ ಸೇರಿದಂತೆ ಎಲ್ಕೆಜಿಯಿಂದ 10ನೇ ತರಗತಿ ವರೆಗೆ ಒಟ್ಟು 2,13,938 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ 8ನೇ ತರಗತಿ 21,586, 9ನೇ ತರಗತಿಗೆ 22,243 ಹಾಗೂ 10ನೇ ತರಗತಿಯಲ್ಲಿ 22,594 ವಿದ್ಯಾರ್ಥಿಗಳು ಇದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಒಂದರಿಂದ ಹತ್ತನೇ ತರಗತಿವರೆಗೆ ಶೇಕಡಾ 30ರಷ್ಟು ಪುಸ್ತಕ ಪೂರೈಸಲಾಗಿದೆ. ಖಾಸಗಿ ಶಾಲೆಗೆ ಮಾರಾಟ ಮಾಡಲು 3.88 ಲಕ್ಷ ಪುಸ್ತಕದ ಅಗತ್ಯವಿದ್ದು, 64,220 ಪುಸ್ತಕವಷ್ಟೇ ಬಂದಿದೆ. ಎರಡು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಪುಸ್ತಕ ಪೂರೈಕೆ ಆಗಲಿದೆ ಎಂಬ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲೆಯಲ್ಲಿ ಆ. 23ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ.

Post a Comment

Previous Post Next Post