ಬೇಲೂರು:ಕೆಪಿಸಿಸಿ ಆದೇಶದಂತೆ ದೇಶದಲ್ಲಿ ಬೆಲೆ ಏರಿಕೆ ವಿರುದ್ಧ ಸೈಕಲ್‌ಜಾಥಾ ನಡೆಸುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಿಂದ ಬೆಳಿಗ್ಗೆ ೧೦ ಗಂಟೆಗೆ ಜಾಥಾ ಹೊರಡಲಿದ್ದು, ನೆಹರೂನಗರದವರಗೆ ಸಾಗಲಿದೆ. ಇದರಲ್ಲಿ ಭಾಗವಹಿಸುವ ಮೂಲಕ ಜಾಥಾ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಬೆಲೆ ಏರಿಕೆ ವಿರುದ್ಧ ಈಗಾಗಲೇ ಹಲವು ಭಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಜನರನ್ನು ಎಚ್ಚರಿಸುವತ್ತ ನಮ್ಮ ಹೋರಾಟ ಸಾಗಿದೆ. ದಿನಬಳಕೆ ವಸ್ತುಗಳ ಬೆಲೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೈಗೆ ಎಟಕುವಂತಿತ್ತು. ಇದೀಗ ಎರಡು, ಮೂರು ಪಟ್ಟು ಹೆಚ್ಚಾಗಿದೆ. ಇದು ಜನಸಾಮಾನ್ಯರಿಗೂ ಅರಿವಾಗಿದೆ. ಮುಂದಿನ ಯಾವುದೇ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ. ಇದಕ್ಕಾಗಿ ಜಾಗೃತಿಗೊಳಿಸುವ ಕೆಲಸ ನಮ್ಮದಾಗಿದೆ ಎಂದು ಹೇಳಿದರು.