ಬೇಲೂರು:ತಾಲ್ಲೂಕು ಹಗರೆ ಗ್ರಾಮದ ಕಾಂಗ್ರೆಸ್ ಯುವನಾಯಕ ರವೀಶ್, ತಮ್ಮ ಹುಟ್ಟು ಹಬ್ಬವನ್ನು ಕಡುಬಡವರಿಗೆ ನೆರವು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
![]() |
| ಬೇಲೂರು ತಾಲ್ಲೂಕು ಹಗರೆ ಗ್ರಾಮದ ಸಂತೆಮೈದಾನದಲ್ಲಿ ಬಡವರಿಗೆ ಟಾರ್ಪಾಲ್ ವಿತರಿಸಲಾಯಿತು ಮತ್ತು ಹಾಸ್ಟೆಲ್ ಆವರಣದಲ್ಲಿ ಬಿ.ಶಿವರಾಂ ಗಿಡನೆಟ್ಟರು |
ಹಗರೆ ಗ್ರಾಮದ ಸಂತೆ ಮೈದಾನದಲ್ಲಿ ಇರುವ ಆದಿವಾಸಿಗಳ ಸೋರುತ್ತಿರುವ ಮನೆಗಳಿಗೆ ಹೊದಿಸಿಕೊಳ್ಳಲು ೨೦ ಟಾರ್ಪಾಲ್‌ಗಳನ್ನು ವಿತರಿಸಿದರು. ಮತ್ತು ಹಗರೆ ಆಶ್ರಮ ಶಾಲೆ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು.
ಈ ಸಂದರ್ಭ ಮಾತನಾಡಿದ ರವೀಶ್, ಇಂದು ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಹಾಡಿ, ಕುಣಿದು ಪಾರ್ಟಿ ಮಾಡುವ ಮೂಲಕ ಆಚರಿಸಿಕೊಳ್ಳುವುದಿದೆ. ಆದರೆ ನನ್ನ ಹುಟ್ಟು ಹಬ್ಬವನ್ನು ಬಡವರಿಗೆ ಸಹಾಯ ಮಾಡುವ ಮೂಲಕ ಆಚರಿಸಿಕೊಳ್ಳಬೇಕೆಂದು ನನ್ನ ಸ್ನೇಹಿತರೊಂದಿಗೆ ಸಂತೆ ಮೈದಾನದಲ್ಲಿರುವ ಆದಿವಾಸಿಗಳ ಸೋರುವ ಸೂರಿಗೆ ಹೊದಿಕೆಯಾಗಿ ಟಾರ್ಪಾಲೆ ನೀಡಿದ್ದೇವೆ. ಜೊತೆಯಲ್ಲಿ ಮಾಸ್ಕ್ ವಿತರಿಸಿದ್ದೇನೆ. ಹಾಸ್ಟೆಲ್ ಸಮೀಪ ಗಿಡಗಳ ನೆಡಲಾಗಿದೆ. ಈ ನಿರ್ಗತಿಕರಿಗೆ ಶಾಶ್ವತ ನೆಲೆಯೊಂದನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚಿಸಲಾಗುವುದು, ಶಾಸಕರ ಗಮನಕ್ಕೂ ವಿಷಯ ತಂದಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಯುವ ಘಟಕದ ಕಾಂಗ್ರೆಸ್ ಅಧ್ಯಕ್ಷ ಗೊರೂರು ರಂಜಿತ್ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಬಿಜೆಪಿ ಸರ್ಕಾರ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರು, ದಲಿತರ ಪರವಾಗಿ ಕಾಂಗ್ರೆಸ್ ಧ್ವನಿಯಾಗಿದೆ ಎನ್ನುವುದಕ್ಕೆ ರವೀಶ್ ತಮ್ಮ ಹುಟ್ಟುಹಬ್ಬವನ್ನು ಬಡವರಿಗೆ ಸಹಾಯ ಮಾಡುವ ಮೂಲಕ ಅವರ ನಡುವೆಯೇ ಆಚರಿಸಿಕೊಳ್ಳುತ್ತಿರುವುದೆ ಸಾಕ್ಷಿ ಎಂದರು.
ಯುವಮುಖಂಡ ಸತೀಶ್ ಮಾತನಾಡಿ, ರವೀಶ್ ಹುಟ್ಟುಹಬ್ಬವನ್ನು ಅವರ ಗೆಳೆಯರ ಬಳಗದಿಂದ ಪಕ್ಷಾತೀತವಾಗಿ ಟಾರ್ಪಾಲ್ ವಿತರಿಸುವ ಹಾಗೂ ಗಿಡಗಳ ನೆಡುವ ಮೂಲಕ ಆಚರಿಸಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ. ಮುಂದೆಯೂ ನೊಂದವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
![]() |
| Advertisement |
ಹಾಸ್ಟೆಲ್ ಸಮೀಪ ಗಿಡನೆಟ್ಟು ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ರವೀಶ್ ಅವರು ಹುಟ್ಟುಹಬ್ಬವನ್ನು ಗಿಡಗಳ ನೆಡುವ ಹಾಗೂ ಬಡವರಿಗೆ ಟಾರ್ಪಾಲ್ ನೀಡುವ ಮೂಲಕ ಆಚರಿಸಿರುವುದು ಸಂತಸದ ವಿಷಯ. ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಕನಿಷ್ಟ ೧೦ ಹಣ್ಣಿನ ಗಿಡ ನೆಡುವ ಮೂಲಕ ಆಚರಿಸಿಕೊಳ್ಳುವುದು ಒಳ್ಳೆಯದು. ಬಡವರಿಗೆ ನೆರವು ನೀಡಬೇಕೆಂದರು.
ತಾಲ್ಲೂಕು ಯುವಘಟಕದ ಅಧ್ಯಕ್ಷ ಆರ್.ದರ್ಶನ್, ತಾ.ಪರಿಶಿಷ್ಟಜಾತಿ ವರ್ಗ ಘಟಕದ ಅಧ್ಯಕ್ಷ ಸತೀಶನಾಯಕ್, ಹೋಬಳಿ ಅಧ್ಯಕ್ಷ ಎಸ್.ಗೌಡ, ಹಾಗೂ ಸುನಿಲ್, ಚೇತು, ಕಲ್ಕೆರೆಸತೀಶ್, ಆನಂದ್, ಮಹ್ಮದ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಜಗದೀಶ್, ವಡ್ಡರಹಳ್ಳಿ ಆನಂದ್, ಹೂವುರಾಜ್ ಇದ್ದರು.

