ಸೋಮನಹಳ್ಳಿ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಬೇಲೂರು:ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸೋಮನಹಳ್ಳಿ ಗ್ರಾಮಸ್ಥರು ತಿರುಗಾಡಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ್ದನ್ನು ಖಂಡಿಸಿ ಹಾಗೂ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬೇಲೂರು ತಾಲ್ಲೂಕು ಇಬ್ಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮ ರಸ್ತೆ ದುಸ್ಥಿತಿ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು 

ಈ ಸಂದರ್ಭ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಘೋಷಣೆ ಕೂಗಿದರು. ಆನಂತರ ಸೋಮನಹಳ್ಳಿ ಗ್ರಾಮದ ಶಿವರಾಮಯ್ಯ ಮಾತನಾಡಿ, ಇಬ್ಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸೋಮನಹಳ್ಳಿ ಗ್ರಾಮದಲ್ಲಿ ೪೦ ಕುಟುಂಬಗಳಿವೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಲಿನ ಡೈರಿ, ಬ್ಯಾಂಕ್, ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯತಿ, ಗ್ರಂಥಾಲಯ ಮತ್ತು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ಗ್ರಾಮದಿಂದ ೨ ಕೀಮೀ. ದೂರದ ಇಬ್ಬೀಡು ಗ್ರಾಮದವರಿಗೆ ನಡೆದು ಹೋಗಬೇಕಾಗಿದೆ. ಆದರೆ ಈ  ರಸ್ತೆ ತೀವ್ರ ದುಸ್ಥಿತಿಯಿಂದ ಹದಗೆಟ್ಟಿದೆ.

ಈ ಬಗ್ಗೆ ನಾವುಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮತ್ತು ಶಾಸಕ ಕೆಎಸ್.ಲಿಂಗೇಶ್ ಅವರಿಗೆ ಮನವಿ ಸಲ್ಲಿಸಿದರು ಯಾವ ಪ್ರಯೋಜನವಾಗಿಲ್ಲ. ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ರಸ್ತೆ ಕಾಮಗಾರಿ ನಡೆದಿದೆ ಎಂದು ವೇದಿಕೆ ಮೇಲೆ ಹೇಳುತ್ತಾರೆ. ಆದರೆ ನಮ್ಮ ಕುಗ್ರಾಮದ ಮೇಲೆ ಕನಿಕರ ಬಂದಿಲ್ಲ ಎಂದು ಆಳಲು ಹೇಳಿಕೊಂಡರು.


ತಕ್ಷಣವೇ ಗ್ರಾಮಕ್ಕೆ ಅನುಕೂಲವಾದ ರಸ್ತೆಯ ಕಾಮಗಾರಿಗೆ ಚಾಲನೆ ನೀಡಬೇಕು, ಇಲ್ಲವಾದರೆ ಸಂಬಂಧಿಸಿದ ಇಲಾಖೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಸೋಮನಹಳ್ಳಿ ಗ್ರಾಮದ ರೇವಣ್ಣ ಮಾತನಾಡಿ, ಗ್ರಾಮವನ್ನು ಸಂಂಬಂಧಿಸಿದಂತೆ ಜನನಾಯಕರು ಮತ್ತು ಅಧಿಕಾರಿಗಳು ಮರತಂತಿದೆ. ಇವರುಗಳ ದಿವ್ಯ ನಿರ್ಲಕ್ಷ್ಯದಿಂದ ಗ್ರಾಮ ಇತ್ತೀಚಿನ ದಿನದಲ್ಲಿ ಕುಗ್ರಾಮ ಪಟ್ಟಿಗೆ ಸೇರಿದೆ. ಈ ದೋರಣೆ ವಿರುದ್ಧ ಸದ್ಯದಲ್ಲಿಯೇ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ  ಮಹೇಶ್, ಪರಶಯ್ಯ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಹೇಮಾಮ್ಮ, ಸುಮಿತ್ರ, ಸಿಡಲಿಮ್ಮ, ದಿಪೀಕ್ ಇನ್ನೂ ಮುಂತಾದವರು ಹಾಜರಿದ್ದರು.


Post a Comment

Previous Post Next Post