ಅನಂತರಾಜೇ ಅರಸು
ಬೇಲೂರು: ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಲಾಗುವ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡರಾಜ್ಯೋತ್ಸವ ಸಂದರ್ಭ ಹಾರಿಸಲಾಗುವ ಧ್ವಜದ ಸ್ಥಂಭ ಬದಲಾವಣೆಯ ಅಗತ್ಯವಿದೆ.
![]() |
| ಬೇಲೂರಿನ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ರಂಗಮಂದಿರದ ಮುಂಭಾಗದಲ್ಲಿರುವ ಧ್ವಜಾರೋಹಣದ ಧ್ವಜಸ್ಥಂಭದ ಸ್ಥಿತಿಗತಿ |
ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ರಂಗಮಂದಿರಕ್ಕೆ ಹೊಂದಿಕೊಂಡಂತಿರುವ ಈ ಧ್ವಜಸ್ಥಂಭದಲ್ಲಿ ಹಾರಿಸಲಾಗುವ ಧ್ವಜಕ್ಕೂ ಮತ್ತು ಧ್ವಜಸ್ಥಂಭಕ್ಕೂ ವ್ಯತ್ಯಾಸವಿರುವುದಲ್ಲದೆ, ಧ್ವಜದ ಕೆಳಭಾಗದಲ್ಲಿ ತುಂಡರಿಸಲಾದ ಪೈಪನ್ನು ವೆಲ್ಡ್ ಮಾಡಿಸಿರುವುದು ಕಂಡುಬಂದಿದೆ.
ವೆಲ್ಡ್ ಮಾಡಿಸಿರುವುದರಿಂದ ತೊಂದರೆ ಏನೂ ಇಲ್ಲವೆನ್ನುವುದಾದರೂ ಧ್ವಜಾರೋಹಣ ನೆರವೇರಿಸುವಾಗ ಧ್ವಜದ ಸ್ಥಂಭ, ಧ್ವಜಾ ಇಂತಿಷ್ಟೇ ಅಳತೆಯದ್ದಿರಬೇಕೆಂಬ ನಿಯಮವಿದ್ದು ಈ ಧ್ವಜಸ್ಥಂಭ ಹಾಗೂ ಈ ಸ್ಥಂಭದ ಮೇಲೆ ಹಾರಲಾಗುವ ಧ್ವಜ ಒಂದಕ್ಕೊಂದು ಸಾಮ್ಯತೆ ಇಲ್ಲದಂತೆ ಹಾರಾಡುವಂತಾಗಿದೆ.
ಅಂದರೆ, ಇದನ್ನು ವ್ಯವಸ್ಥೆ ಮಾಡಿರುವವರಿಗೆ ಧ್ವಜಸ್ಥಂಭ ಹಾಗೂ ಧ್ವಜದ ನಿಯಮದ ಅರಿವು ಇಲ್ಲವೆಂದು ಭಾವಿಸುವುದು ತಪ್ಪಾದೀತು. ಎಲ್ಲವೂ ತಿಳಿದೇ ಇಲ್ಲಿ ತಪ್ಪು ಆಗುತ್ತಿದೆ. ಇದಕ್ಕೆ ಕಾರಣ ಧ್ವಜಸ್ಥಂಭದ ಕಟ್ಟೆ. ಈಗ ಇರುವ ಧ್ವಜಸ್ಥಂಭದ ಕಟ್ಟೆಯು ರಂಗಮಂದಿರಕ್ಕೆ ಅಳವಡಿಸಿರುವ ಮೇಲ್ಛಾವಣಿಗೆ ಕೇವಲ ಒಂದೂಮುಕ್ಕಾಲು ಅಡಿ ಅಂತರದಲ್ಲಿದೆ. ಧ್ವಜಸ್ಥಂಭದ ಅಳತೆ ಅನುಸಾರ ನಿಯಮದಂತೆ ಧ್ವಜವನ್ನು ಬಳಕೆ ಮಾಡಿದರೆ, ಧ್ವಜವು ರಂಗಮಂದಿರದ ಮೇಲ್ಛಾವಣಿಗೆ ತಗುಲಿ ಹಾರಲಾಗದೆ ಅಂಟಿಕೊಳ್ಳುತ್ತದೆ.
ಇದನ್ನು ಮನಗಂಡ ವ್ಯವಸ್ಥಾಪಕರು, ಧ್ವಜಸ್ಥಂಭಕ್ಕೆ ಚಿಕ್ಕದಾದ ಧ್ವಜವನ್ನೇ ಬಳಕೆ ಮಾಡುತ್ತಿದ್ದಾರೆ. ಇದು ಧ್ವಜಾರೋಹಣದ ನಿಯಮಗಳ ವಿರುದ್ಧವಾಗುತ್ತದೆ. ವಿಧಿಯಿಲ್ಲದೆ ಹಲವು ವರ್ಷಗಳಿಂದ ಇದೆ ರೀತಿ ನಡೆಸಿಕೊಂಡು ಬರಲಾಗುತ್ತಿದೆ.
ಇದಕ್ಕೆ ರ‍್ಯಾಯ ಮಾರ್ಗವೆಂದರೆ, ಧ್ವಜದ ಕಟ್ಟೆಯನ್ನು ೫ ಅಡಿಯಷ್ಟು ದೂರದಲ್ಲಿ ಕಟ್ಟಿಸಿ ಧ್ವಜ ಹಾರಿಸುವುದು. ಕಳೆದ ೪ ವರ್ಷದ ಹಿಂದೆ ಧ್ವಜಕಟ್ಟೆಯನ್ನು ಕಟ್ಟಿಸುವ ಉದ್ದೇಶದಿಂದ ಪುರಸಭೆಯವರು ಧ್ವಜದ ಸ್ಥಂಭವನ್ನು ತುಂಡರಿಸಿ ತೆಗೆಸಿದ್ದರು. ಆದರೆ ಆನಂತರ ಕಟ್ಟೆ ನಿರ್ಮಿಸಲಿಲ್ಲ. ಪರಿಣಾಮ ತುಂಡರಿಸಿದ ಧ್ವಜದ ಕಂಬವನ್ನು ವೆಲ್ಡ್ ಮಾಡಿಸಿ ಹಿಂದಿನಂತೆ ಧ್ವಜಾರೋಹಣ ನೆರವೇರಿಸಲಾಯಿತು. ಇಂದಿಗೂ ಅದು ಮುಂದುವರಿದಿದೆ.
ಬದಲಿ ಧ್ವಜಕಟ್ಟೆ ನಿರ್ಮಾಣ ಮಾಡಿಸುವ ಆಲೋಚನೆ ಸಂಬಂಧಿಸಿದವರಿಗೆ ಬರಬೇಷ್ಟೇ. ಅಲ್ಪ ಪ್ರಮಾಣದ ವೆಚ್ಚದ ಕೆಲಸ ಇದಾಗಿದ್ದು ಆಸಕ್ತಿ ತೋರಬೇಕಿದೆ. ಇಲ್ಲದಿದ್ದಲ್ಲಿ ನಿಯಮದ ವಿರುದ್ಧದ ಧ್ವಜಾರೋಹಣ ನಿರಂತರವಾಗಿರುತ್ತದೆ.
![]() |
| Advertisement |

