ಬೇಲೂರು ಜಿಗುರಿದ ಪ್ರವಾಸೋಧ್ಯಮ ಚಟುವಟಿಕೆ-ವ್ಯಾಪಾರ ವಹಿವಾಟು

ಅನಂತರಾಜೇಅರಸು ಬೇಲೂರು

ವಿಜಯದಶಮಿ ಹಾಗೂ ದಸರಾ ರಜೆ ಹಿನ್ನೆಲೆಯಲ್ಲಿ ಕಳೆದ ೩ ದಿನಗಳಿಂದ ಪ್ರವಾಸಿಗರ ಆಗಮನ ಸಂಖ್ಯೆ ಹೆಚ್ಚಾಗಿದೆ. 

ಕಳೆದ ೨ ವರ್ಷದಿಂದ ಕೋವಿಡ್ ಅಲೆಯಲ್ಲಿ ಸ್ಥಗಿತವಾಗಿದ್ದ ಪ್ರವಾಸೋದ್ಯಮದ ಚಟುವಟಿಕೆಗಳು ಪುನಾರಂಭಗೊAಡಿದ್ದು ವ್ಯಾಪಾರ ವಹಿವಾಟುಗಳು ಭರ್ಜರಿಯಾಗಿ ನಡೆದಿದೆ. ಮಿತಿಮೀರಿದ ವಾಹನಗಳ ಓಡಾಟದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದೆ ಕಷ್ಟ ಎನ್ನುವಂತಾಗಿದೆ. ಪಟ್ಟಣಕ್ಕೆ ಕೇವಲ ೨ ಕಿ.ಮೀ.ದೂರದಲ್ಲಿರುವ ಯಗಚಿ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. 

ಬೇಲೂರಿನ ಯಗಚಿ ಜಲಾಶಯ ಬಳಿ ವಾಹನಗಳು ಹಾಗೂ ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ಓಡಾಟ   

ಪ್ರವಾಸಿಗರು ಹೆಚ್ಚು ಬರುತ್ತಿದ್ದರೂ ಶ್ರೀಚನ್ನಕೇಶವ ದೇವಾಲಯದ ದಾಸೋಹ ವ್ಯವಸ್ಥೆ ಆರಂಭಗೊಳ್ಳದಿರುವ ಬಗ್ಗೆ ಪ್ರವಾಸಿಗರು ಹಾಗೂ ಭಕ್ತರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವಾರು ದೇಗುಲದಲ್ಲಿ ಸಾವಿರಾರು ಭಕ್ತರನ್ನು ಒಳಗೊಂಡಂತೆ ಉತ್ಸವ, ಜಾತ್ರೆಗಳು ನಡೆಯುತ್ತಿದ್ದರೂ ಇಲ್ಲಿ ಮಾತ್ರ ಕೊರೊನಾ ನೆಪವೊಂದನ್ನು ಇಟ್ಟುಕೊಂಡು ಉತ್ಸವಗಳ ನಿರ್ಬಂಧ ಎಗ್ಗಿಲ್ಲದೆ ನಡೆಯುತ್ತಿದೆ. ವಿಜಯದಶಮಿಯಂದು ಕುದರೆ ಉತ್ಸವ ನಡೆಯುವುದಕ್ಕೂ ಅಧಿಕಾರಿಗಳು ಹಿಂಜರಿಕೆ ಮಾಡಿದ್ದರಾದರೂ ಶಾಸಕ ಕೆಎಸ್.ಲಿಂಗೇಶ್ ಅವರು ತೆಗೆದುಕೊಂಡ ಕೆಲವೊಂದು ಕ್ರಮದಿಂದ ಜಿಲ್ಲಾಧಿಕಾರಿಗಳಿಂದ ಉತ್ಸವಕ್ಕೆ ಅನುಮತಿ ದೊರೆತು ಉತ್ಸವ ನಡೆಸಲಾಯಿತು. ದೇಗುಲದ ಕೆಲಸ ಕಾರ್ಯಗಳ ನಿರ್ಲಿಪ್ತತೆಗೆ ದೇಗುಲದಲ್ಲಿ ವ್ಯವಸ್ಥಾಪನ ಸಮಿತಿ ಇಲ್ಲದಿರುವುದು ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ೨ ವರ್ಷದಿಂದ ಕೋವಿಡ್ ಮಹಾಮಾರಿಯಿಂದಾಗಿ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರಗಳಾದ ಬೇಲೂರು, ಹಳೇಬೀಡು ಹಾಗೂ ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕೊರತೆಯಿಂದ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ ಅಲೆ ಕಡಿಮೆ ಆಗುತ್ತಿರುವಂತೆ ಸರ್ಕಾರವು ನಿಯಮಾವಳಿಗಳನ್ನು ಸಡಿಲ ಪಡಿಸಿದ ಹಿನ್ನಲೆಯಲ್ಲಿ  ಮತ್ತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಾಗಿದೆ. ಅದರಲ್ಲೂ ವಿಜಯ ದಶಮಿ ಹಾಗೂ ದಸರಾ ರಜೆ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಭಕ್ತರಿಗೆ ದಾಸೋಹ ವ್ಯವಸ್ಥೆ ಆರಂಭ ಗೊಳ್ಳದಿರುವುದು  ನಿರಾಸೆ ಮೂಡಿಸಿದೆ.

ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಇಳಿಮುಖವಾದ ನಿಟ್ಟಿನಲ್ಲಿ ಧರ್ಮಸ್ಥಳ, ಹೊರನಾಡು, ಕಟೀಲು, ಶೃಂಗೇರಿ, ಚಾಮುಂಡಿ ಬೆಟ್ಟ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಮುಜರಾಯಿ ದೇಗುಲದಲ್ಲಿ ಮಧ್ಯಾಹ್ನದ ಅನ್ನ ದಾಸೋಹ ಈಗಾಗಲೇ ನಡೆಯುತ್ತಿದೆ. ಅದರೆ ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿ ಮಾತ್ರ ಇಲ್ಲಿನ ಆಡಳಿತ ವ್ಯವಸ್ಥೆ ದಾಸೋಹ ಆರಂಭಿಸಲು, ಜಿಲ್ಲಾಡಳಿತದ ಆದೇಶಕ್ಕೆ ಕಾಯುತ್ತಿದೆ. ಚನ್ನಕೇಶವಸ್ವಾಮಿ ದರ್ಶನ ಪಡೆಯಲು ಬರುತ್ತಿರುವ ಪ್ರವಾಸಿಗರು ಮತ್ತು ಭಕ್ತರು ಸಂಬಂಧಿಸಿದ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಜನರು ಸೇರಿ  ರಾಜಕೀಯ ಸಭೆ, ಸಮಾರಂಭಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಂದರ್ಭದಲ್ಲಿ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ಸ್ವಾಮಿ ದೇಗುಲದಲ್ಲಿ ದಾಸೋಹ ಆರಂಭಿಸಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಭಕ್ತರು ದೂರಿದ್ದಾರೆ.

ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ ಮಾತನಾಡಿ, ಪ್ರವಾಸೋದ್ಯಮ, ಪುರಾತತ್ವ ಹಾಗೂ ಮುಜರಾಯಿ ಇಲಾಖೆಗಳ ಅಧಿಕಾರಿಗಳಿಗೆ ಬೇಲೂರಿನ ಮೇಲೆ ಏಕೀ ದ್ವೇಷ ಅರ್ಥವಾಗುತ್ತಿಲ್ಲ. ರಾಜ್ಯದ ವಿವಿಧ ಭಾಗದ ಹಂಪೆ ಸೇರಿದಂತೆ ಇನ್ನು ಮುಂತಾದ ಸ್ಥಳದಲ್ಲಿ ಸಾವಿರಾರು ಜನರು ಸಾಗರೋಪಾಧಿಯಲ್ಲಿ ಸೇರಿ, ಉತ್ಸವ ಮತ್ತು ಜಾತ್ರೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರದ ಮಂತ್ರಿಗಳು ಬೇಲೂರಿಗೆ ಭರವಸೆಯ ಮಹಾಪೂರವೇ ಹರಿಸಿದ್ದಾರೆ. ಇಲ್ಲಿಯವರೆಗೆ ಯಾವ ಕೆಲಸವಾಗಿಲ್ಲ, ಶೀಘ್ರವೇ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನ ನೀಡಿ, ಪ್ರವಾಸಿಗರ ಮತ್ತು ಭಕ್ತರ ಅನುಕೂಲಕ್ಕಾಗಿ  ಅನ್ನ ದಾಸೋಹಕ್ಕೆ ಆರಂಭಿಸಬೇಕು  ಎಂದು ಒತ್ತಾಯಿಸಿದ್ದಾರೆ.

ಚನ್ನಕೇಶವಸ್ವಾಮಿ ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಮಾತನಾಡಿ, ದೇಗುಲದಲ್ಲಿ ನಡೆಯುವ ಎಲ್ಲಾ ಸಂಪ್ರದಾಯಬದ್ದ ಉತ್ಸವ ಮತ್ತು ದಾಸೋಹ ಯಾವುದೇ ಅಡ್ಡಿ ಇಲ್ಲದೆ ನಡೆಯಬೇಕು ಎಂದು ಸಂಂಬಂಧಿಸಿದ ಮಂತ್ರಿಗಳ ಬಳಿ ಚರ್ಚಿಸಿದ್ದೇವೆ. ಅವರು ಕೂಡ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ದೇಗುಲದಲ್ಲಿ ಅನ್ನದಾಸೋಹ ಆರಂಭಿಸುವ ಬಗ್ಗೆ ಜಿಲ್ಲಾಡಳಿತ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 




         


Post a Comment

Previous Post Next Post