ಬೇಲೂರು : ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಸಂಕೀರ್ಣಕ್ಕೆ ಭೇಟಿ ನೀಡಿದ ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ ಭೇಟಿ ನೀಡಿ ಪರಿಶೀಲಿಸಿದರು.
| ಬೇಲೂರಿನ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ವ್ಯವಸ್ಥೆ ವೀಕ್ಷಿಸುತ್ತಿರುವ ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ ಅಧಿಕಾರಿ, ನೌಕರರು |
ಸಂಕೀರ್ಣದಲ್ಲಿ ಇರುವ ತರಕಾರಿ ಮಾರುಕಟ್ಟೆ ಆವರಣವನ್ನು ವೀಕ್ಷಿಸಿದ ಅಧ್ಯಕ್ಷರು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ವಾಣಿಜ್ಯ ಮಳಿಗೆ ವ್ಯಾಪಾರಿಗಳು ಅಧ್ಯಕ್ಷರನ್ನು ಭೇಟಿಯಾಗಿ, ವಾಣಿಜ್ಯಮಳಿಗೆ ಸಂಕೀರ್ಣದೊಳಗೆ ದ್ವಿಚಕ್ರ ವಾಹನಗಳನ್ನು ತಂದು ನಿಲ್ಲಿಸುವುದು ಹೆಚ್ಚುತ್ತಿದೆ. ಇದರಿಂದ ನಮಗೆ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ. ವಾಹನ ನಿಲುಗಡೆ ಮಾಡುವವರಿಗೆ ವಾಹನ ನಿಲ್ಲಿಸಬೇಡಿ ಎಂದರೆ ಜಗಳಕ್ಕೆ ಬರುತ್ತಾರೆ. ನಾವು ಪುರಸಭೆಗೆ ಬಾಡಿಗೆ ಕಟ್ಟಿಲ್ಲ ಎಂದರೆ ಬಾಗಿಲು ಹಾಕಿಸಲು ಬರುತ್ತಾರೆ, ಆದರೆ ನಮ್ಮ ಸಮಸ್ಯೆ ಯಾರಿಗೆ ಹೇಳುವುದು ಎಂದು ನೋವು ವ್ಯಕ್ತಪಡಿಸಿದರು.
ಯಾವುದೆ ಕಾರಣಕ್ಕೂ ವಾಣಿಜ್ಯ ಸಂಕೀರ್ಣದೊಳಗೆ ದ್ವಿಚಕ್ರ ಸೇರಿದಂತೆ ಯಾವುದೆ ರೀತಿಯ ವಾಹನ ನಿಲ್ಲಿಸದಂತೆ ಸೂಚಿಸಿದ ಅಧ್ಯಕ್ಷ ಸಿ.ಎನ್.ದಾನಿ, ಸಿಬ್ಬಂದಿ ಒಬ್ಬರನ್ನು ನೇಮಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ತರಕಾರಿ ಮಾರಾಟದ ಕಟ್ಟೆ ವೀಕ್ಷಿಸಿದ ಅಧ್ಯಕ್ಷರು, ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಬೀದಿಬದಿ ವ್ಯಾಪಾರ ಮಾಡಬಾರದೆಂದು ವಾಣಿಜ್ಯ ಸಂಕೀರ್ಣದೊಳಗೆ ವ್ಯಾಪಾರಕ್ಕೆ ಕಟ್ಟೆ ಕಟ್ಟಿಸಿ ಮೇಲ್ಚಾವಣಿ ನಿರ್ಮಿಸಿ ಕೊಟ್ಟಿದ್ದರೂ ಟಾರ್ಪಾಲ್ ಕಟ್ಟಿಕೊಂಡಿರುವುದು ಸರಿಯಲ್ಲ. ಕೂಡಲೆ ಅದನ್ನು ತೆರೆವುಗೊಳಿಸಬೇಕು ಮತ್ತು ಯಾರಿಗೆ ವ್ಯಾಪಾರಿ ಕಟ್ಟೆ ಕೊಡಲಾಗಿದೆಯೋ ಅವರೇ ಅಲ್ಲಿ ವ್ಯಾಪಾರ ಮಾಡಬೇಕೆಂದು ಸೂಚಿಸಿದರು. ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಸುಜಯಕುಮಾರ್ ಹಾಗೂ ನೌಕರರು ಇದ್ದರು.