ಬೇಲೂರು: ಬೆಳಗಾವಿಯಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಎಂಇಎಸ್ ಕಿಡಿಗೇಡಿಗಳ ವರ್ತನೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆಗೆ ಹಾಸನ ಜಿಲ್ಲಾ ನಾರಾಯಣಗೌಡರ ಬಣದ ಕರವೇ ಕಾರ್ಯಕರ್ತರು ತೆರಳಿದ ವೇಳೆ ಅವರನ್ನು ಬಂಧಿಸಲಾಗಿದೆ.
ಪ್ರತಿಭಟನೆ ನಡೆಸುವುದಕ್ಕಾಗಿ ತೆರಳುತ್ತಿದ್ದ ಕಾರ್ಯಕರ್ತರನ್ನು ಬೆಳಗಾವಿಯಲ್ಲಿ ತಡೆದ ಪೊಲೀಸರು, ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಬಂಧನಕ್ಕೆ ಒಳಗಾದ ಸಂದರ್ಭ ಕಾರ್ಯಕರ್ತರು ಎಂಇಎಸ್ ವರ್ತನೆ ಖಂಡಿಸಿ ಘೋಷಣೆ ಕೂಗಿದ್ದಾರೆ. ಬಂಧನಕ್ಕೂ ಮುಂಚೆ ಮಾತನಾಡಿದ ಜಿಲ್ಲಾ ಕರವೇ ಉಪಾಧ್ಯಕ್ಷ ಸೀತಾರಾಮ್, ಎಂಇಎಸ್ ಪುಡಾರಿಗಳು ಕನ್ನಡ ಧ್ವಜವನ್ನು ಸುಟ್ಟು ಕನ್ನಡ ವಿರೋಧಿ ನೀತಿ ಅನುಸರಿಸಿದ್ದಾರೆ. ಇದನ್ನು ಖಂಡಿಸಿ ಬೆಳಗಾವಿಗೆ ನಮ್ಮ ರಾಜ್ಯಾಧ್ಯಕ್ಷ ನಾರಾಯಣಗೌಡರ ಸೂಚನೆಯಂತೆ ತೆರಳುತ್ತಿದ್ದು ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬೇಲೂರಿನಿಂದ ಬೆಳಗಾವಿ ಪ್ರತಿಭಟನೆಗೆ ತೆರಳಿರುವ ಕರವೇ ಪ್ರಮುಖರು
ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, `ಕರವೇ ಕಡೆ ಬೆಳಗಾಗಿ ಕಡೆ' ಮೂಲಕ ಬೆಳಗಾವಿಗೆ ಬಂದಿದೆ. ಬೆಳಗಾವಿ ನಮ್ಮದಾಗಿದ್ದು ಇಲ್ಲಿರುವ ಮರಾಠಿಗರು ಎಚ್ಚರಿಕೆಯಿಂದ ಇರಬೇಕಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು ಇಲ್ಲಿನ ಸುವರ್ಣಸೌಧದಲ್ಲಿ ೨೨೪ ಜನ ಶಾಸಕರು ಇಲ್ಲಿದ್ದಾರೆ. ಇವರೆಲ್ಲರು ಏನು ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಲೋಕಸಭಾ ಸದಸ್ಯರು ಪ್ರಧಾನಿ ಗಮನಕ್ಕೆ ಘಟನೆಯನ್ನು ತರಬೇಕಿದೆ. ಇಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬೆಳಗಾವಿ ನಮ್ಮದು, ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನ ಖಂಡನೀಯ ಎಂದರು.
ಕರವೇ ಜಿಲ್ಲಾ ಸಂಚಾಲಕ ಅಬ್ದುಲ್‌ಖಾದರ್ ಮಾತನಾಡಿ, ೨೨೪ ಜನ ಶಾಸಕರು ಒಮ್ಮತದಿಂದ ಬೆಳಗಾವಿ ಘಟನೆಯನ್ನು ಖಂಡಿಸಿ ರಾಜ್ಯದ ಪರವಾದ ನಿರ್ಣಯ ಕೈಗೊಳ್ಳಬೇಕಿದೆ. ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಹೆಚ್ಚಾಗಿದೆ. ಇಲ್ಲಲಿರುವವರು ಎಚ್ಚರದಿಂದ ಇರಬೇಕಿದೆ. ಕೇಂದ್ರದಿAದ ಕರ್ನಾಟಕಕ್ಕೆ ಬರುವ ಅನುದಾನ ಕಡಿಮೆ ಆಗುತ್ತಿರುವುದು ವಿಶಾಧನೀಯ. ಕನ್ನಡಿಗರ ಮೇಲಿನ ಅನ್ಯಾಯ, ದೌರ್ಜನ್ಯ ತಡೆಯಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ನಮ್ಮ ಹೋರಾಟ ಹತ್ತಿಕ್ಕಿವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ನಾವು ಯಾರೂ ಬೆದರಿಕೆಗೆ ಹೆದರುವುದಿಲ್ಲ. ನಾವು ೮೦ ಲಕ್ಷ ಕಾರ್ಯಕರ್ತರು ಇದ್ದು ಒಂದೇ ಬಾರಿ ಮುತ್ತಿಗೆ ಹಾಕಿದರೆ ಏನೆಲ್ಲಾ ಆಗಬಹುದು ಎಂಬುದನ್ನು ಅರಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.