ಬೇಲೂರು:
ಇಲ್ಲಿನ ರಸ್ತೆಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿಯಾಗಿ ಸ್ಥಳ ಪಡೆದು ವಿಸ್ತರಣೆ ಮಾಡುವ ಸಂಬಂಧ ಶಾಸಕ ಕೆಎಸ್.ಲಿಂಗೇಶ್ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಬೇಲೂರು ಬಸ್ ನಿಲ್ದಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿಯಾಗಿ ಸ್ಥಳ ಪಡೆಯಲು ಪರಿಶೀಲನೆ ನಡೆಸುತ್ತಿರುವ ಶಾಸಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು |
ಈ ಸಂದರ್ಭ ಮಾತನಾಡಿದ ಶಾಸಕ ಕೆಎಸ್.ಲಿಂಗೇಶ್, ಬೆಳಗಾವಿ ಅಧಿವೇಶನದಲ್ಲಿ ಬಸ್ ನಿಲ್ದಾಣದ ಸ್ಥಳದ ಕೊರತೆ ಕುರಿತು ಚರ್ಚಿಸಿದ್ದೆ. ಬಸ್ ನಿಲ್ದಾಣದೊಳಗಿನ ಕಟ್ಟಡಕ್ಕಿಂತ ಉಳಿಕೆ ಸ್ಥಳ ಕಿರಿದಾಗಿದ್ದು ಬಸ್ ನಿಲುಗಡೆಗೆ ತೊಂದರೆ ಆಗುತ್ತಿರುವುದನ್ನು ಮನವರಿಕೆ ಮಾಡಿಕೊಟ್ಟು ಪಕ್ಕದಲ್ಲೆ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ದೇಗುಲ ರಸ್ತೆಯಿಂದ ಮೂಡಿಗೆರೆ ರಸ್ತೆಯವರಗೆ ೨೦ ಅಡಿ ಅಗಲದಷ್ಟು ಸ್ಥಳ ನೀಡುವಂತೆ ಮನವಿ ಮಾಡಿದ್ದೇನೆ.
ಅದರ ಪರಿಣಾಮ ಲೋಕೋಪಯೋಗಿ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ಚಿಕ್ಕಮಗಳೂರು ಹಾಗೂ ಹಾಸನದ ವಿಭಾಗೀಯ ಅಧಿಕಾರಿಗಳು ಒಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ. ನಿಲ್ದಾಣಕ್ಕೆ ಎಷ್ಟು ಸ್ಥಳ ಬಿಟ್ಟುಕೊಡಬಹುದು ಎಂಬುದರ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸ್ಥಳ ಹಸ್ತಾಂತರದ ನಂತರ ನಿಲ್ದಾಣದ ವಿಸ್ತರಣೆಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಟಿ.ವೀರೇಶ್, ಮಾತನಾಡಿ, ಬೇಲೂರಿನ ಸಾರಿಗೆ ಬಸ್ ಸಂಚಾರದಲ್ಲಿನ ಸಮಸ್ಯೆ ಕುರಿತು ಶಾಸಕರು ಗಮನಕ್ಕೆ ತಂದಿದ್ದಾರೆ. ಇದರ ಜೊತೆಗೆ ಬಸ್ ನಿಲ್ದಾಣ ವಿಸ್ತರಣೆ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನ ಹರಿಸಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಬಗೆಹರಿಸಲಾಗುವುದು. ಬೇಲೂರಿನಿಂದ ಮೂಡಿಗೆರೆಗೆ ತೆರಳುವ ವೇಗದೂತ ಬಸ್ಸುಗಳೂ ಸೇರಿದಂತೆ ಎಲ್ಲಾ ಬಸ್ಸುಗಳನ್ನು ಕಾಲೇಜು ಬಳಿ ನಿಲ್ಲಿಸುವಂತೆ ಆದೇಶ ಮಾಡಲಾಗಿದೆ.
ಬೆಳಿಗ್ಗೆ ೮ ಗಂಟೆಯಿಂದ ೧೦ ಗಂಟೆಯವರಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಹೆಚ್ಚುವರಿಯಾಗಿ ಬಸ್ಸುಗಳ ಓಡಿಸುವಂತೆ ಮತ್ತು ಚಿಕ್ಕಮಗಳೂರಿನಿಂದ ಆಗಮಿಸುವ ಎಲ್ಲಾ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಕಡ್ಡಾಯವಾಗಿ ಅವಕಾಶ ಮಾಡಿಕೊಡಬೇಕೆಂದು ಶಾಸಕರು ಸೂಚಿಸಿದ್ದಾರೆ. ಈ ಬಗ್ಗೆ ಇಲಾಖೆಯ ಲೈನ್ ಚಕಿಂಗ್ ಜೀಪಿನಿಂದ ಪರಿಶೀಲನೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ವಿಭಾಗೀಯ ಸಾರಿಗೆ ಅಧಿಕಾರಿ ದಿನೇಶಕುಮಾರ್‌ಚನ್ನಗಿರಿ ಇದ್ದರು.