ನಾಡಿನ ನೆಲ, ಜಲ, ಸಂಸ್ಕೃತಿ, ಅಸ್ಮಿತೆಗೆ ಧಕ್ಕೆ ಉಂಟಾದಾಗ ರಕ್ಷಣೆಗೆ ನಿಲ್ಲುವುದು ಪರಿಷತ್ತಿನ ಕರ್ತವ್ಯ. ಕನ್ನಡದ ಬಾವುಟ ಈ ನೆಲದ ಗೌರವದ ಸಂಕೇತ. ಅಂತಹ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಇದು ಕನ್ನಡಿಗರ ಗೌರವಕ್ಕೆ ತುಂಬ ಅಘಾತ ಉಂಟು ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಸಂಗೋಳಿ ರಾಯಣ್ಣ ಕೇವಲ ಒಂದು ರಾಜ್ಯಕ್ಕೆ ಸೀಮಿತವಾದವರಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ. ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನ. ಇದು ನಿಜವಾಗಿಯೂ ದೇಶ ದ್ರೋಹದ ಕೆಲಸ ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಂದಾಗಿ ಗಟ್ಟಿಯಾದ ನಿಲುವು ತಾಳಬೇಕು. ಕನ್ನಡಿಗರ, ಕನ್ನಡಪರ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕು. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾರ ಬಗ್ಗೆಯೂ ಮೃದು ಧೋರಣೆ ತೋರುವುದು ಸರಿಯಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ- ಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ತಪ್ಪು. ಕನ್ನಡ ಬಾವುಟ ಸುಡುವುದು, ರಾಯಣ್ಣ ಪ್ರತಿಮೆ ವಿರೂಪ ಹಾಗೂ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದೂ ಖಂಡನೀಯ ಎಂದು ಹೇಳಿದರು.
ಎಂ.ಇ.ಎಸ್ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಮರಾಠಿಗರಿಗೆ, ಗಡಿನಾಡಿನ ಕನ್ನಡಿಗರಿಗೆ ಹಾಗೂ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಕನ್ನಡಪರ ಸಂಘಟನೆಗಳ ತುರ್ತು ಸಭೆ ಕರೆದು ಜಿಲ್ಲೆಯಲ್ಲಿ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ, ಮಮತೇಶ್, ದೇವರಾಜು ಇದ್ದರು.