ಬೇಲೂರು :
ಪಟ್ಟಣದ ನೆಹರೂನಗರದ ಮಿನಿವಿಧಾನಸೌಧದ ಎದಿರು ಚಿಕ್ಕಮಗಳೂರಿಗೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೇಲೂರಿನ ನೆಹರೂನಗರದ ಚಿಕ್ಕಮಗಳೂರು ರಸ್ತೆಯ ಪಕ್ಕದಲ್ಲಿ ಹೊಟೇಲ್ ಮುಂಭಾಗ ರಸ್ತೆಗೆ ಹೊಂದಿಕೊಂಡಂತೆ ವಾಹನಗಳ ನಿಲುಗಡೆ ಮಾಡಿರುವುದು
|
ನೆಹರೂನಗರದ ವೃತ್ತದಿಂದ ಚಿಕ್ಕಮಗಳೂರಿಗೆ ತೆರಳುವ ರಸ್ತೆಯಲ್ಲಿ ಪೊಲೀಸ್ ಕ್ವಾಟ್ರಸ್‌ಗೆ ಹೋಗುವ ರಸ್ತೆಯವರಗೆ ರಸ್ತೆಯ ಪಕ್ಕದಲ್ಲಿ ಹೊಟೇಲ್ ಇನ್ನಿತರ ಅಂಗಡಿ ಮುಂಗಟ್ಟುಗಳಿದ್ದು ಇದರ ಮುಂಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ವಾಹನಗಳ ನಿಲುಗಡೆ ಮಾಡುವುದರಿಂದ ರಸ್ತೆ ಸಂಚಾರಕ್ಕೆ ತೊಡಕಾಗುತ್ತಿದೆ.
ಮಿನಿವಿಧಾನಸೌಧದಲ್ಲಿರುವ ಹಲವು ಕಚೇರಿಗಳಿಗೆ ಕೆಲಸ ಕಾರ್ಯಕ್ಕೆಂದು ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ ಇಲ್ಲದೆ ಅನಿವಾರ್ಯವಾಗಿ ರಸ್ತೆಗೆ ಹೊಂದಿಕೊಂಡಂತೆ ನಿಲ್ಲಿಸುವುದು ಕಂಡುಬರುತ್ತಿದೆ. ವಾಹನಗಳನ್ನು ದೂರದಲ್ಲಿ ನಿಲುಗಡೆ ಮಾಡಲು ಸಾಧ್ಯವಾಗದಂತೆ ಟಾರ್ಪಾಲ್ ಹೊದಿಕೆಯ ಹೊಟೇಲ್ ಇನ್ನಿತರ ವ್ಯಾಪಾರಿ ಮಳಿಗೆಗಳಿಂದ ಅಡ್ಡಿಯಾಗುತ್ತಿದೆ.
ವಾಹನ ನಿಲುಗಡೆ ಮಾಡುವ ಹಾಗೂ ಹೊಟೇಲ್ ಇರುವ ಸ್ಥಳದ ಮೇಲ್ಭಾಗದಲ್ಲಿ ಹೈಟೆಕ್ಷನ್ ವಿದ್ಯುತ್ ಲೈನ್ ಹಾಗೂ ಇನ್ನಿತರ ವಿದ್ಯುತ್ ವೈರುಗಳು ಇದ್ದು ಟೊಳ್ಳಿನಿಂದ ಕೂಡಿದ ಮರಗಳು ಇದೆ ಸ್ಥಳದಲ್ಲಿ ಇರುವುದರಿಂದ ಮರದ ಕೊಂಬೆ ಏನಾದರೂ ತುಂಡಾಗಿ ಬಿದ್ದರೆ ಪ್ರಾಣಾಪಾಯ ತಪ್ಪಿದ್ದಲ್ಲ ಎಂಬುದು ಹಲವರ ಅಭಿಪ್ರಾಯ. ಒಂದು ವಾರದ ಹಿಂದೆ ಮಿನಿವಿಧಾನಸೌಧದ ಮುಂಭಾಗ ವಾಹನಗಳ ನಡುವೆ ಅಪಘಾತ ಉಂಟಾಗಿ ಓರ್ವರು ಮೃತಪಟ್ಟಿದ್ದರು. ಕಿರಿದಾದ ರಸ್ತೆಯ ಒಂದು ಕಡೆ ಆಟೋ ನಿಲುಗಡೆ ಇದ್ದು ಇದು ಸಾರ್ವಜನಿಕರ ಹಿತದೃಷ್ಠಿಯಿಂದ ಅನಿವಾರ್ಯವಾಗಿದೆ. ಆದರೆ ಇದರ ಎದುರಿನಲ್ಲಿರುವ ಹೊಟೇಲ್‌ಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪವಿದೆ. ಇದೆ ರಸ್ತೆಯಲ್ಲಿ ಕೆಲವರು ಅಕ್ರಮ ವಿದ್ಯುತ್ ಸಂಪರ್ಕ ಪಡೆದು ವ್ಯಾಪಾರ ನಡೆಸುತ್ತಿದ್ದಾರೆಂಬ ದೂರುಗಳೂ ಕೇಳಿಬರುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಅರೇಹಳ್ಳಿ ನಿಂಗರಾಜು, ರೈತನಾಯಕ ಕುಮಾರ್, ಜಯಕರ್ನಾಟಕದ ಅರುಣಕುಮಾರ್, ಮಿನಿವಿಧಾನಸೌಧದ ಎದುರಿನ ರಸ್ತೆ ಕಿರಿದಾಗಿದ್ದು ಇದರ ಪಕ್ಕದಲ್ಲೆ ಹೊಟೇಲ್‌ಗಳನ್ನು ಇಟ್ಟಿರುವುದರಿಂದ ವಾಹನಗಳ ನಿಲ್ಲಿಸಲು ತೊಂದರೆ ಆಗುತ್ತಿದೆ. ಹೊಟೇಲ್ ಇರುವ ಸ್ಥಳದ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಇದೆ. ಇದೆ ಜಾಗದಲ್ಲಿ ಬೃಹತ್ ಮರಗಳಿದ್ದು ಮರದ ಕೊಂಬೆ ಮುರಿದುಬಿದ್ದರೆ ಅನಾಹುತ ತಪ್ಪಿದ್ದಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು, ಹೊಟೇಲ್‌ಗಳನ್ನು ಇನ್ನಷ್ಟು ದೂರಕ್ಕೆ ಇಡುವಂತೆ ಸೂಚಿಸಬೇಕು, ಅಕ್ರಮವಾಗಿ ಸಂಪರ್ಕ ಹೊಂದಿರುವ ವಿದ್ಯುತ್ ಸಂಪರ್ಕ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.