ಶಿಳ್ಳೆ-ಚಪ್ಪಾಳೆ: ಕೆಂಪಗೌಡನಹಳ್ಳಿಯ ಶ್ರೀ ವೀರಾಂಜನೇಯ ಸೇವಾ ಸಮಿತಿ ಪ್ರಥಮ ಬಾರಿಗೆ ಭಾನುವಾರ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 72 ಎತ್ತಿನಗಾಡಿಗಳು ಪಾಲ್ಗೊಂಡಿದ್ದವು. 3000 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ಎತ್ತಿನಗಾಡಿಗಳ ಓಟದಲ್ಲಿ ಪಾಲ್ಗೊಂಡಿದ್ದವರು ಬಹುಮಾನ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಗಾಡಿಗಳನ್ನು ಓಡಿಸುತ್ತಿದ್ದುದು, ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಳ್ಳೆ, ಕೂಗಾಟಗಳು ರಂಜನೀಯವಾಗಿದ್ದವು.
ನಿರೀಕ್ಷೆಗೂ ಮೀರಿದ ಜನ: ನಿರೀಕ್ಷೆಗೂ ಮೀರಿ ಬಂದಿದ್ದ ಪ್ರವೇಶದಿಂದಾಗಿ ಸ್ಥಳಾವಕಾಶದ ಕೊರತೆ ಇದ್ದರೂ ಕಾರ್ಯಕ್ರಮ ಸಂಘಟಕರು ಸ್ಪರ್ಧೆಗೆ ಬಂದಿದ್ದ ಎತ್ತಿನಗಾಡಿಗಳ ನಿರ್ವಹಿಸಲು ಪರದಾಡಿದರು. ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಿ ಸ್ಪರ್ಧೆ ನಿರ್ವಹಿಸಿದರು. ಸುಮಾರು 60 ಅಡಿಗಳ ಎರಡು ಟ್ರ್ಯಾಕ್‌ಗಳಲ್ಲಿ ಎತ್ತಿನಗಾಡಿಗಳನ್ನು ಓಡಿಸಲು ವ್ಯವಸ್ಥೆ ಮಾಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎತ್ತಿನಗಾಡಿಗಳು ಒಂದೂವರೆಯಿಂದ 2 ನಿಮಿಷದೊಳಗೆ ಸುಮಾರು 300 ಮೀಟರ್ ಗುರಿ ಮುಟ್ಟಿದವು.
ಒಂದೂವರೆ ನಿಮಿ ಷದೊಳಗೆ ಗುರಿ ಮುಟ್ಟಿದ ಎತ್ತಿನಗಾಡಿಗಳನ್ನು ಕ್ರಮ ವಾಗಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು ಎಂದು ಸ್ಪರ್ಧೆಯ ಸಂಘಟಕರು ಮಾಹಿತಿ ನೀಡಿದರು. ವಿಶೇಷವಾದ ಎತ್ತಿನಗಾಡಿ ಸ್ಪರ್ಧೆ ನೋಡಲು ನೆರೆಹೊರೆಯ ಗ್ರಾಮಗಳಿಂದ ಸಾವಿರಾರು ಜನ ಸೇರಿದ್ದರು. ಸ್ಪರ್ಧೆ ನಡೆಯುವ ಸಮೀಪದಲ್ಲಿ ತಿಂಡಿ ತಿನಿಸುಗಳ ಅಂಗಡಿಗಳೂ ತೆರೆದಿದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಬೀರೂರಿಗೆ ಪ್ರಥಮ ಸ್ಥಾನ
ಎತ್ತಿನಗಾಡಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬೀರೂರಿನ ಎತ್ತಿನಗಾಡಿಗೆ 50 ಸಾವಿರ ರೂ.ನಗದು, 2ನೇ ಬಹುಮಾನ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಎತ್ತಿನಗಾಡಿಗೆ 40 ಸಾವಿರ ರೂ., ಕೆಂಪಗೌಡನಹಳ್ಳಿ ಗ್ರಾಮದ ಎತ್ತಿನಗಾಡಿಗೆ 3ನೇ ಬಹುಮಾನ 30 ಸಾವಿರ ರೂ. ಮೈಸೂರು ಜಿಲ್ಲೆಯ ಎತ್ತಿನ ಗಾಡಿಗೆ 4ನೇ ಬಹುಮಾನ 20 ಸಾವಿರ ರೂ. ಮತ್ತು ಟ್ರೋಫಿ ವಿತರಿಸಲಾಯಿತು.