ಬೇಲೂರು : ಶಾಸಕರು ಸೇರಿದಂತೆ ಸಮಸ್ಯೆಗೆ ಸಂಬAಧಿಸಿದ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗದೆ ಇರುವುದನ್ನು ಖಂಡಿಸಿ ಮದಘಟ್ಟ ಗ್ರಾಮಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸಭೆ ಬಹಿಷ್ಕರಿಸಿ ಗ್ರಾಮಸ್ಥರು ಹೊರ ನಡೆದ ಘಟನೆ ನಡೆದಿದೆ.
| ಬೇಲೂರು ತಾ.ಮದಘಟ್ಟ ಗ್ರಾ.ಪಂ.ಗ್ರಾಮಸಭೆಯಲ್ಲಿ ಬಿಕೋ ಎನ್ನುತ್ತಿರುವ ವೇದಿಕೆ |
ತಾಲೂಕಿನ ಬಿಕ್ಕೋಡು ಹೋಬಳಿಯ ಮದಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮೂಲಭೂತ ಸೌರ‍್ಯಗಳ ಕುರಿತು ಚರ್ಚಿಸಲು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲು ಶಾಸಕರ ನೇತೃತ್ವದಲ್ಲಿ ಗ್ರಾಮಪಂಚಾಯತಿ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತು. ಗ್ರಾಮ ಸಭೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ೯ ಜನ ಸದಸ್ಯರು ಗ್ರಾಮಪಂಚಾಯತಿ ಸಭೆಗೆ ತಯಾರಿ ನಡೆಸಿದ್ದರು.
ಗ್ರಾಮಸಭೆಯ ಕರಪತ್ರವನ್ನು ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಎಲ್ಲಾ ವಿತರಿಸಲಾಗಿತ್ತು. ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಸಭೆ ಶಾಸಕರಿಗೆ ಹಾಗೂ ಅಧಿಕಾರಿಗಳ ಗೈರಿನಿಂದ ಮಧ್ಯಾಹ್ನ ೩ ಗಂಟೆಯಾದರೂ ನಡೆಯಲಿಲ್ಲ. ತಡವಾಗಿಯಾದರೂ ಶಾಸಕರೂ, ಅಧಿಕಾರಿಗಳು ಯಾರೂ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಪಂಚಾಯಿತಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಮುತ್ತಣ್ಣ ಹಾಗೂ ಸುಮಂತ್, ನಮ್ಮ ಮದಘಟ್ಟ ಪಂಚಾಯತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಮೂಲಭೂತ ಸೌಕರ್ಯಗಳೆ ಇಲ್ಲವಾಗಿದೆ. ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಅಧಿಕಾರಿಗಳೆ ಇಲ್ಲದೆ ಗ್ರಾಮ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸುವುದಾದರೂ ಹೇಗೆ. ಹಲವಾರು ಸಮಸ್ಯೆಗಳಿದ್ದು ಶಾಸಕರಿಗೆ ಮನವಿ ಮಾಡಲು ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿದ್ದವು. ನಮ್ಮ ಸಮಸ್ಯೆಗೆ ಸ್ಪಂದಿಸದ ಶಾಸಕರು ಹಾಗೂ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿಲ್ಲ. ಇವರ ಧೋರಣೆ ಖಂಡಿಸಿ ಗ್ರಾಮ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದರು.
ಗಾಂಧಾರ ಬುದ್ಧವಿಹಾರದ ಉಪಾಸಕರಾದ ಶಶಿಧರ್ ಮರ‍್ಯ ಮಾತನಾಡಿ, ೫ ವರ್ಷದಿಂದ ಸರಕಾರ ಆಶ್ರಯ ಮನೆಗಳನ್ನು ಹಂಚಿಕೆ ಮಾಡಿಲ್ಲ. ಸಾಮಾಜಿಕ ನ್ಯಾಯ ಬದ್ಧತೆಯನ್ನು ಒದಗಿಸಬೇಕಾದ ಅಧಿಕಾರಿಗಳೆ ಸಭೆಗೆ ಬರದಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಭಾಗದಲ್ಲಿ ರೈತರು, ಕೂಲಿಕರ‍್ಮಿಕರು ಹಾಗೂ ವೃದ್ಧಾಪ್ಯ ವೇತನ ಪಡೆಯಲು ವೃದ್ಧರು ತಮ್ಮ ಕುಂದು ಕೊರತೆಗಳನ್ನು ಹೇಳಲು ಆಗಮಿಸಿದ್ದರು. ನೂರಾರು ಗ್ರಾಮಸ್ಥರು ಬಂದಿದ್ದರು. ಯಾವ ಅಧಿಕಾರಿಗಳು ಬರದೆ ಇರುವುದು ಬೇಸರವಾಗಿದೆ. ಇದೇ ರೀತಿ ಮುಂದೆಯೂ ನಡೆದರೆ ಗ್ರಾಮಸ್ಥರು ಸೇರಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಗ್ರಾಮಪಂಚಾಯತಿ ಅಧ್ಯಕ್ಷ ಉದಯ್ ಕುಮಾರ್, ಗ್ರಾಮಸ್ಥರಾದ ಮುತ್ತಣ್ಣ, ಸುಮಂತ್, ಮಲ್ಲಿಕಾರ್ಜುನ್, ಕಿಶೋರ್, ಕಾಂತರಾಜು, ಶಿವಕುಮಾರ್, ಶಶಿಧರ್ ಮರ‍್ಯ ಮುಂತಾದವರು ಹಾಜರಿದ್ದರು.