ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರೀತಂ ಜೆ.ಗೌಡ ಉದ್ದೇಶ

ಹಾಸನ: 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಶಾಸಕ ಪ್ರೀತಂ ಜೆ.ಗೌಡ ಈ ರೀತಿ ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದಾರೆ' ಎಂದು ಕೆಪಿಸಿಸಿ ಸದಸ್ಯ ಎಚ್‌.ಕೆ. ಮಹೇಶ್‌ ಆರೋಪಿಸಿದರು.

‌'ಹಾಸನದಿಂದ ಪ್ರೀತಂ ಗೌಡ ಹೆಸರಿನಲ್ಲಿ ಕೆಪಿಸಿಸಿ ಕಚೇರಿಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಅರ್ಜಿ ಬಂದಿರುವುದು ನಿಜ.


ಆದರೆ, ಶಾಸಕರು ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸವಾಲು ಹಾಕುತ್ತಿದ್ದಾರೆ‌.‌ ಯಾವ ಅಧಿಕಾರದಲ್ಲಿಯೂ ಇಲ್ಲದ ಕಾಂಗ್ರೆಸ್‌ ನಾಯಕರು ಹಾಗೂ ಮುಖಂಡರ ಸಂಪರ್ಕವನ್ನು ಶಾಸಕ ಪ್ರೀತಂ ಏಕೆ ಇಟ್ಟುಕೊಂಡಿದ್ದಾರೆ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

"ನನಗೂ ಜೆಡಿಎಸ್‌ಗೂ ಸಂಬಂಧವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಸೋಲುವ ಭೀತಿ ಇರುವ ಕಾರಣ ಕಾಂಗ್ರೆಸ್‌ ಸೇರಲು ಪ್ರೀತಂ ಹೊರಟಿದ್ದಾರೆ. ಆದ್ದರಿಂದಲೇ ಜೆಡಿಎಸ್‌ನ ಭವಾನಿ ರೇವಣ್ಣ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಹಾಸನದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿದ್ದಾರೆ' ಎಂದು ಟೀಕಿಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಪ್ರೀತಂ ಗೌಡ ಜನರಿಗೆ ಕೊಟ್ಟ ಭರವಸೆಗಳು ಏನಾದವು? ನಗರಸಭೆ ಸದಸ್ಯ, ಗ್ರಾಮ ಪಂಚಾಯಿತಿ ಸದಸ್ಯನೂ ಆಗದೇ ಜನರ ಕಣ್ಣಿಗೆ ಮಣ್ಣು ಎರಚಿ ಕಳೆದ ಬಾರಿ ಗೆಲುವು ಸಾಧಿಸಿದರು ಎಂದರು .

'ಜಿಲ್ಲೆಯಲ್ಲಿ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರರಿಂದ ಕಮಿಷನ್‌ ವಸೂಲಿ ಮಾಡಲಾಗುತ್ತಿದೆ. ನನ್ನ ಆರೋಪ ಸುಳ್ಳು ಎನ್ನುವುದಾದರೆ ಪ್ರೀತಂ ಅವರು ಶಾಸಕರಾಗಿದ್ದಾಗ ಅವರ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣವಿತ್ತು. ಈಗ ಎಷ್ಟಿದೆ ? ಆದಾಯದ ಮೂಲ ಯಾವುದೇ ಎಂಬುನ್ನು ಬಹಿರಂಗಪಡಿಸಲಿ' ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯರಾದ ಆರೀಫ್, ಚಂದು, ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಪ್ರತಿನಿಧಿ ವಿನೋದ್, ಹೇಮಂತ್ ಇದ್ದರು.

Post a Comment

Previous Post Next Post