ಬೇಲೂರು : ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯನ್ನು ಖಂಡಿಸಿ ಇಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂಪರಿಷತ್ತು ಕಾರ್ಯಕರ್ತರು ಮಾನವ ಸರಪಳಿ ಮೂಲಕ ರಸ್ತೆತಡೆಯೊಂದಿಗೆ ಪ್ರತಿಭಟನೆ ನಡೆಸಿದರು.
ಬೇಲೂರಿನಲ್ಲಿ ಭಜರಂಗದಳ ಕಾರ್ಯಕರ್ತರು ಶಿವಮೊಗ್ಗದ ಹರ್ಷನ ಕೊಲೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿದರು |
ಇದೆ ವೇಳೆ ಕೊಲೆಗಾತಕರ ವಿರುದ್ಧ ಘೋಷಣೆ ಕೂಗಿದರಲ್ಲದೆ ಟೈರಿಗೆ ಬೆಂಕಿ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ವಿಶ್ವಹಿಂದೂಪರಿಷತ್ತು ತಾಲ್ಲೂಕು ಅಧ್ಯಕ್ಷ ಕೃಷ್ಣೇಗೌಡ, ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನನ್ನು ಮುಸ್ಲೀಂ ಸಂಘಟನೆಗಳ ಕಾರ್ಯಕರ್ತರು ಅಮಾನುಷವಾಗಿ ಕೊಲೆಗೈದಿದ್ದಾರೆ. ಅವರನ್ನು ಶೀಘ್ರದಲ್ಲೆ ಬಂಧಿಸಬೇಕು, ಇಂತಹ ಘಟನೆಯನ್ನು ಪ್ರತಿಯೊಬ್ಬ ಹಿಂದೂವು ಖಂಡಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಅನಿಲಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ಜಿಹಾದಿ ದುಷ್ಕರ್ಮಿಗಳು ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಈ ಜಿಹಾದಿಗಳು ತಮ್ಮ ಭಯೋತ್ಪಾದನೆ ಮೂಲಕ ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಹಿಂದೂಧರ್ಮವನ್ನು ಉಳಿಸಲು ಭಜರಂಗದಳ ಸನ್ನದ್ಧವಾಗಿದೆ. ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಭಜರಂಗದಳದಕ್ಕೆ ಗೃಹಖಾತೆ ಕೊಟ್ಟು ನಂತರ ನೋಡಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ೨೮ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಈಗ ಬಿಜೆಪಿ ಸರಕಾರ ಹಿಂದೂತ್ವದ ಆಧಾರವಾಗಿ ಅಧಿಕಾರಕ್ಕೆ ಬಂದಿದ್ದರೂ ಹಿಂದೂಗಳ ಹತ್ಯೆ ನಿಲ್ಲಿಸಲಾಗಿಲ್ಲ. ಗೋವಧೆ ವಿರುದ್ಧದ ಕಾನೂನು ನೆಪಮಾತ್ರಕ್ಕೆ ಎಂಬAತೆ ಆಗಿದೆ. ಪುರಸಭೆಯ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಪ್ರತಿನಿತ್ಯ ಗೋಹತ್ಯೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆಂಬ ಆರೋಪವಿದೆ. ಅಮಾಯಕ ಕೃತ್ಯಗಳು ನಿರಂತರವಾಗುತ್ತಿವೆ. ಬಿಜೆಪಿ ಸರಕಾರ ಮುಲಾಜಿಗೆ ಒಳಗಾದರೆ ಬಿಜೆಪಿ ಸರಕಾರವೂ ಉಳಿಯಲ್ಲ, ಹಿಂದೂತ್ವವೂ ಉಳಿಯಲ್ಲ. ಹರ್ಷನ ಸಾವು ಕೊನೆಯಾಗಬೇಕು, ಆ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ತಾಲ್ಲೂಕು ಭಜರಂಗದಳ ಅಧ್ಯಕ್ಷ ಮಂಜುನಾಥ್, ಬಿಜೆಪಿ ನಗರಾಧ್ಯಕ್ಷ ವಿನಯ್, ಪ್ರಮುಖರಾದ ಶಶಿ, ಮುರುಳಿ, ಜಿನತ್, ನಿಖಿಲ್, ಸುಪ್ರೀತ್, ರಾಜೇಶ್, ಹೇಮಂತ್, ಮೋಹನ್, ಸುಮನ್ ಇತರರು ಇದ್ದರು. ಸಿಪಿಐ ಯೋಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.