ಬೇಲೂರು :
ಇಲ್ಲಿ ಪುರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಸಿ.ಎನ್.ದಾನಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ಪಟ್ಟಣದ ಪ್ರಮುಖ ಸಮಸ್ಯೆಯಾದ ರಸ್ತೆ ವಿಸ್ತರಣೆ ಕುರಿತು ಗೊಂದಲದ ಹೇಳಿಕೆಗಳು, ಚರ್ಚೆಗಳು ಆಗುತ್ತಿವೆ. ಈವರಗೆ ಇದ್ದಂತ ಪಟ್ಟಣದ ನೆಹರೂನಗರದಿಂದ ಜೆ.ಪಿ.ನಗರದವರಗಿನ ವಿಸ್ತರಣೆ ವಿಷಯ ಇದೀಗ ಬಂಟೇನಹಳ್ಳಿಯಿಂದ ತೊಳಲಿನವರಗೆ ಎಂದು ಹೇಳಲಾಗುತ್ತಿದ್ದು ಇದಕ್ಕಾಗಿ ೧೨೦೦ ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗುತ್ತಿದೆ. ಈ ವಿಷಯದಲ್ಲಿ ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರವಾಗಲಿ ಸ್ಪಷ್ಟತೆ ಇಲ್ಲದೆ ಯೋಜನೆ ರೂಪಿಸುತ್ತಿವೆ. ಎಲ್ಲವೂ ನಾಮಕಾವಸ್ತೆಯಂತಾಗಿದೆ. ಈವರಗೆ ಇದ್ದಂತ ೧೦೦ ರಿಂದ ೨೦೦ ಕೋಟಿ ರೂ. ವೆಚ್ಚದ ವಿಸ್ತರಣೆ ಯೋಜನೆ ನೆನೆಗುದಿಗೆ ಬಿದ್ದಿದೆ. ಎಎಲ್‌ಎ, ಎಂಪಿ ಮನಸ್ಸು ಮಾಡಬೇಕಿದೆ ಎಂದರು.
ಪ್ರತಿಕ್ರಿಯಿಸಿದ ಅಧ್ಯಕ್ಷ ಸಿ.ಎನ್.ದಾನಿ, ರಸ್ತೆ ವಿಷಯವಾಗಿ ಪ್ರವಾಸೋಧ್ಯಮ ಸಚಿವರಲ್ಲಿ ಪ್ರಸ್ಥಾಪಿಸಿದ್ದೇನೆ, ಪತ್ರ ವ್ಯವಹಾರ ಸಹ ನಡೆಸಿದ್ದೇವೆ. ವಿಶ್ವಪ್ರಸಿದ್ಧ ಪ್ರವಾಸಿಸ್ಥಳ ಅಭಿವೃದ್ಧಿಯಾಗಿಲ್ಲ. ಶಾಸಕರು, ಮಂತ್ರಿಗಳು ಕ್ರಮ ಕೈಗೊಳ್ಳಬೇಕಿದೆ. ವಿಷ್ಣುಸಮುದ್ರ ಕೆರೆಯಲ್ಲಿ ದೋಣಿವಿಹಾರ, ಪ್ರವಾಸಿಮಂದಿರದ ಬಳಿ ಫುಡ್‌ಕೋರ್ಟ್ ನಿರ್ಮಾಣ, ೨೩ ವಾರ್ಡುಗಳಲ್ಲಿ ಉದ್ಯಾನವನ ನಿರ್ಮಾಣ, ಪುರಸಭೆಯ ಸ್ಥಳ ಒತ್ತುವರಿ ತೆರವು, ಹಳೆತರಕಾರಿ ಮಾರುಕಟ್ಟೆ ಆವರಣದಲ್ಲಿ ಶೌಚಾಲಯ ನಿರ್ಮಾಣ ಇವುಗಳಿಗೆ ೧೫ ದಿನದಲ್ಲಿ ಚಾಲನೆ ನೀಡಲಾಗುವುದು. ಪುರಸಭೆಗೆ ೧೦೦ ವರ್ಷ ಆಗಿರುವುದರಿಂದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಗಿರೀಶ್ ಒತ್ತಾಯಿಸಿದರು. ಪುರಸಭೆ ಹೊಸಕಟ್ಟಡ ಉದ್ಘಾಟನೆ ಜೊತೆಗೆ ಶತವರ್ಷಾಚರಣೆ ಸಮಾರಂಭ ನಡೆಸಲಾಗುವುದು. ಈ ವೇಳೆ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ೫೦೦ ಕೋಟಿ ರೂ. ನೀಡುವಂತೆ ಪ್ರಸ್ಥಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಡವರಿಗೆ ನಿವೇಶನ ನೀಡಲು ಪಟ್ಟಣದ ಸುತ್ತಲಿನಲ್ಲಿ ೨೫ ಎಕರೆ ಭೂಮಿ ಪಡೆಯುವಂತೆ ಮನವಿ ಮಾಡಿದ ಸದಸ್ಯ ಅಶೋಕ್, ಬೀದಿನಾಯಿ ಹಾಗೂ ಮಂಗಗಳ ಹಾವಳಿ ಹೆಚ್ಚಿದ್ದು ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ `ಕಳೆದ ತಿಂಗಳು ನಾಯಿ ಹಿಡಿಯಲು ಬಂದಿದ್ದರು' ಎಂಬ ನಾಮಿನಿ ಸದಸ್ಯ ಜಗದೀಶ್ ಹೇಳಿಕೆ, ಸದಸ್ಯ ಜಮಾಲುದ್ದೀನ್, ಅಶೋಕ್, ಜಗದೀಶ್ ನಡುವೆ ಭಾರಿ ಚರ್ಚೆಗೆ ಗ್ರಾಸವಾಯಿತು. ರಾಯಪುರದ ಬಳಿ ಪುರಸಭೆಗೆ ಸೇರಿದ ೫ ಎಕರೆ ಭೂಮಿ ಇದ್ದು ಇನ್ನೂ ೨೦ ಎಕರೆಗೆ ತಹಸೀಲ್ದಾರ್‌ಗೆ ಮನವಿ ಮಾಡಿದ್ದೇವೆಂದು ಅಧ್ಯಕ್ಷರು ಸಭೆ ಗಮನಕ್ಕೆ ತಂದರು.
ಸಂಜೆವೇಳೆ ಕಸದ ಟಿಪ್ಪರ್ ಬಿಡುವಂತೆ ಮನವಿ ಮಾಡಿದ ಸದಸ್ಯ ತೈಲೇಶ್, ಪಂಪ್‌ಹೌಸ್ ರಸ್ತೆಯಲ್ಲಿ ಪುರಸಭೆಯ ೪.೫ ಗುಂಟೆ ನಿವೇಶನ ಒತ್ತುವರಿಯಾಗುತ್ತಿದ್ದು ವಶಕ್ಕೆ ಪಡೆಯುವಂತೆ ಹಾಗೂ ಮುಖ್ಯರಸ್ತೆಯ ಎರಡೂ ಬದಿ ವ್ಯಾಪಾರದ ಗಾಡಿಗಳು ಹೆಚ್ಚುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ತೆರವುಗೊಳಿಸಬೇಕೆಂದು ಹಾಗೂ ವಾರ್ಡುಗಳಿಗೆ ಸೋಲಾರ್ ಲೈಟು ಕೊಡುವಂತೆ ಮನವಿ ಮಾಡಿದರು. ಸಭಾ ನಡಾವಳಿ ನೀಡಲು ೩ ತಿಂಗಳಾಗುತ್ತಿದೆ ಎಂದು ಗಿರೀಶ್ ಆಕ್ಷೇಪಿಸಿದರು.
ಶ್ರೀಚನ್ನಕೇಶವಸ್ವಾಮಿದೇಗುಲದ ಮುಂಭಾಗ ಪಾರ್ಕಿಂಗ್‌ಗೆ ಅವಕಾಶ ಬೇಡ, ಹಿಂಬದಿ ನಿಲ್ಲಿಸಿಕೊಳ್ಳಲಿ, ಅದರಿಂದ ಪುರಸಭೆಗೆ ಆಧಾಯವೇನೂ ಬರುತ್ತಿಲ್ಲ ಎಂದು ಶಾಂತಕುಮಾರ್ ಸಲಹೆ ನೀಡಿದರು.
ಟೆಂಡರ್‌ನಲ್ಲಿ ಹಿಂಭಾಗ ಎಂದೇ ನಮೂದಾಗಿದ್ದು ಅಲ್ಲಿಯೆ ವಾಹನ ನಿಲ್ಲಿಸಬೇಕಿದೆ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಮುಂದುಗಡೆ ನಿಲ್ಲಿಸದಂತೆ ನೋಡಿಕೊಳ್ಳಲು ಅಧ್ಯಕ್ಷ ದಾನಿ ಸಿಬ್ಬಂದಿಗೆ ಸೂಚಿಸಿದರು. ನಾಡಕಚೇರಿ ಪಕ್ಕ ರಾಘವೇಂದ್ರ ಎನ್ನುವವರಿಗೆ ೧೦ ವರ್ಷ ಲೀಸ್‌ಗೆ ಕೊಡುವ ವಿಷಯ ಚರ್ಚೆ ನಡೆದು ಸದ್ಯಕ್ಕೆ ಯಾವುದೇ ನಿರ್ಣಯಕೈಗೊಳ್ಳದಿರಲು ತೀರ್ಮಾನಿಸಲಾಯಿತು. ಟಿಪ್ಪರ್ ತೊಳೆಯಲಿಕ್ಕೆ ೪೦೦ ರೂ. ಪಡೆಯುತ್ತಿರುವ ಬಗ್ಗೆ ಜೆಡಿಎಸ್ ಸದಸ್ಯ ಜಗದೀಶ್, ನಾಮಿನಿ ಸದಸ್ಯ ಪೈಂಟ್‌ರವಿ ಅಧ್ಯಕ್ಷರ ಗಮನಕ್ಕೆ ತಂದರು.
ಎಕ್ಸ್ಪ್ರೆಸ್ ಕುಡಿಯುವ ನೀರು, ಹೊಸ ಟ್ಯಾಂಕ್‌ಗೆ ನೀರಿನ ಸಂಪರ್ಕ, ಹೆಚ್ಚುವರಿ ಶುದ್ಧೀಕರಣ ಕೇಂದ್ರದ ಮೋಟಾರ್ ಅಳವಡಿಕೆ, ಸುಸಜ್ಜಿತ ಉದ್ಯಾನವನಕ್ಕೆ ಕ್ರಮ ಕೈಗೊಂಡಿರುವ ಅಧ್ಯಕ್ಷರಿಗೆ ಸದಸ್ಯ ಜಮಾಲುದ್ದೀನ್ ಅಭಿನಂದಿಸಿದರು. ಸಿಸ್ಟನ್ ಸ್ವಚ್ಛತೆಗೆ ಸೂಚಿಸಿದರು. ೨೩ ವಾರ್ಡುಗಳಿಗೂ ಲೈಟು ಕೊಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು. ೨ನೇ ವಾರ್ಡಿನ ಜೈಬೀಮ್ ನಗರದಲ್ಲಿ ರಸ್ತೆ ದುರಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ವೇಳೆ ಸೂಚಿಸಿದ್ದರೂ ಎಂಜಿನಿಯರ್ ನಿರ್ಲಕ್ಷö್ಯ ತಾಳಿದ್ದಾರೆಂದು ನಾಮಿನಿ ಸದಸ್ಯ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರಿನಲ್ಲಿ ಹೊಟೇಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದ್ದು ವರ್ತಕರ ಸಭೆ ಕರೆದು ತಿಳುವಳಿಕೆ ನೀಡುವಂತೆ, ದೇಗುಲದ ಕಂದಕ ಮುಚ್ಚದೆ ಸ್ಮಾರಕವನ್ನಾಗಿ ಉಳಿಸಿಕೊಳ್ಳುವಂತೆ ಹಾಗೂ ಮುಖ್ಯರಸ್ತೆ ಬದಿಯಲ್ಲಿ ಮಣ್ಣು ಸುರಿಯುವುದನ್ನು ತಪ್ಪಿಸುವಂತೆ ಕೋರಿದ ಸದಸ್ಯೆ ತೀರ್ಥಕುಮಾರಿ, ಪುರಸಭೆಯ ಮಹಿಳಾ ಶೌಚಾಲಯದಲ್ಲಿ ಸಿಗರೇಟ್ ಪ್ಯಾಕ್ ಇರುವುದರ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಪ್ಲಾಸ್ಟಿಕ್ ಬಳಕೆಗೆ ದಂಡ ಹೆಚ್ಚಳ ಮಾಡಬೇಕು, ವರ್ತಕರ ಸಭೆ ಕರೆದು ಜಾಗೃತಿ ಮೂಡಿಸುವಂತೆ ಶಾಂತಕುಮಾರ್ ಸಲಹೆ ನೀಡಿದರು.
ನಾಮಿನಿ ಸದಸ್ಯರ ಬೋರ್ಡ್ ಹಾಕದಿರುವ ಬಗ್ಗೆ ಹಾಗೂ ದೇವಾಲಯದ ರಸ್ತೆಯಲ್ಲಿರುವ ಪುರಸಭೆಯ ೨೩ ಮಳಿಗೆಗಳಿಂದ ೧ ವರ್ಷದಿಂದಲೂ ಬಾಡಿಗೆ ವಸೂಲಿ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಮಳಿಗೆ ಕಾಲಿ ಮಾಡಿಸಿ ಬೀಗ ಹಾಕಿ ಎಂದರು. ವಾರ್ಡುಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ಸಿಸಿ ಕ್ಯಾಮರಾ ಅಳವಡಿಸಲು ಸಭೆ ತೀರ್ಮಾನಿಸಿತು. ಕಡಿಮೆ ಬಾಡಿಗೆ ಬಾಕಿ ಇರುವ ಮಳಿಗೆಗೆ ಬೀಗ ಹಾಕಿದಂತೆ ಲಕ್ಷಾಂತರ ರೂ. ಬಾಕಿ ಇರುವ ಕೋಳಿ ಮಳಿಗೆಗೂ ಬೀಗ ಹಾಕುವಂತೆ ಮತ್ತು ಪುರಸಭೆಯಲ್ಲಿ ಈ ಸ್ವತ್ತು ದಾಖಲೆ ಕೊಡುವ ವಿಭಾಗಕ್ಕೆ ಹೆಚ್ಚುವರಿ ನೌಕರರನ್ನು ನೇಮಿಸುವಂತೆ, ಜೆಡಿಎಸ್ ಸದಸ್ಯ ಜಗದೀಶ್ ಹಾಗೂ ತೈಲೇಶ್ ಸಲಹೆ ನೀಡಿದರು.
ನಗರೋತ್ಥಾನ ಯೋಜನೆಯಲ್ಲಿ ೧೦ ಕೋಟಿ ರೂ. ಅನುದಾನ ಬರುತ್ತಿದ್ದು ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಪಕ್ಷಪಾತವಿಲ್ಲದೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಅಧ್ಯಕ್ಷ ಸಿ.ಎನ್.ದಾನಿ ಸದಸ್ಯರ ಗಮನಕ್ಕೆ ತಂದರು. ಪುರಸಭೆಯಿಂದ ನೀಡಲಾಗುವ ಬಿಲ್‌ಗಳನ್ನು ಸಕಾಲದಲ್ಲಿ ನೀಡುವಂತೆ ಶಾಂತಕುಮಾರ್ ಸಲಹೆ ನೀಡಿದರು. ಉಪಾಧ್ಯಕ್ಷೆ ರತ್ನಮ್ಮಸತ್ಯನಾರಾಯಣ, ಮುಖ್ಯಾಧಿಕಾರಿ ಸುಜಯಕುಮಾರ್ ಇದ್ದರು.