ಬೇಲೂರು : ಆನೆ ದಾಳಿಯಿಂದ ಇಬ್ಬರು ಮೃತಪಟ್ಟಿರುವುದು ನೋವಿನ ಸಂಗತಿ. ಈ ಬಗ್ಗೆ ಸದನದಲ್ಲಿ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ನಾನು ವಿಷಯ ಪ್ರಸ್ಥಾಪಿಸಿದ್ದು ಸೋಮವಾರ ಆನೆ ದಾಳಿ ಕುರಿತು ಮಾತನಾಡಲು ಸಭಾಪತಿಗಳು ೩೦ ನಿಮಿಷ ಕಾಲಾವಕಾಶ ನೀಡಿದ್ದಾರೆಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ಥಾಪಿಸಿದರಿಂದ ಕೇವಲ ಗಮನ ಸೆಳೆಯಬೇಕಷ್ಟೆ ಎಂಬುದಾಗಿ ಸೂಚನೆ ಬಂತು. ಇದರಿಂದ ಬೇಸರಗೊಂಡ ಜೆಡಿಎಸ್‌ನ ಶಾಸಕರು ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಪರಿಣಾಮ ಚರ್ಚೆಗೆ ಅವಕಾಶ ದೊರೆತಿದೆ. ಇದೊಂದೆ ವಿಚಾರವಲ್ಲದೆ, ಬೆಳೆಹಾನಿ ಪರಿಹಾರ, ಆನೆ ದಾಳಿಯಿಂದ ಸಾವಿಗೀಡಾದವರಿಗೆ ೭.೫ ಲಕ್ಷರೂ. ಪರಿಹಾರದ ಬದಲು ೨೫ ಲಕ್ಷರೂ. ನೀಡಬೇಕೆಂದು ಒತ್ತಾಯಿಸುತ್ತೇವೆ. ಇದರೊಂದಿಗೆ ಇನ್ನಿತರ ಪ್ರಾಣಿಗಳಿಂದ ಆಗುತ್ತಿರುವ ಹಾನಿಯ ಬಗ್ಗೆಯೂ ಪ್ರಸ್ತಾಪಿಸುತ್ತೇವೆಂದು ಹೇಳಿದರು.
ಆನೆ ಕಾರಿಡಾರ್ ನಿರ್ಮಾಣಕ್ಕೆ ೩ ಸಾವಿರ ಹೆಕ್ಟೇರ್ ಭೂಮಿ ಅಗತ್ಯವಿದ್ದು ಸರಕಾರದ ಭೂಮಿಯ ಜೊತೆಗೆ ರೈತರೂ ಸಹ ಬೆಳೆ ಮಾಡದೆ ಹಾಳು ಬಿಟ್ಟಿರುವ ಭೂಮಿ ಕೊಡಲು ಸಿದ್ದರಿದ್ದಾರೆ. ಅವರಿಗೆ ಪರಿಹಾರ ಕೊಟ್ಟರೆ ಸಾಕು. ಬೇರೆ ಕಡೆ ಜಮೀನು ಖರೀದಿಸುತ್ತಾರೆ. ಈ ಬಗ್ಗೆ ಆಯೋಗ ಬಂದು ಪರಿಶೀಲಿಸಿದೆ. ಅಧಿಕಾರಿಗಳು ಸಿದ್ದರಿದ್ದಾರೆ. ಈ ನಡುವೆ ಕೆಲವರು ಇಲ್ಲಿ ಆನೆ ಕಾರಿಡಾರ್ ಅವಶ್ಯಕತೆ ಇಲ್ಲವೆಂದು ಸ್ವಯಂ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸದ್ಯ ಬ್ಯಾರಿಕೇಡ್ ಮಾಡುವುದರಿಂದ ಆನೆ ಬರುವುದನ್ನು ತಡೆಯಬಹುದು.
ಇಂದು ಸಾವಾಗಿದ್ದು ಪರಿಹಾರ ಕೊಟ್ಟರೆ ಸಾಲದು, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅರಣ್ಯ ಇಲಾಖೆಯವರು ಸ್ವೇಚ್ಛಾಚಾರದಂತೆ ನಡೆದುಕೊಳ್ಳುವುದು ಸರಿಯಲ್ಲ. ಮಲೆನಾಡಿನ ಜನರ ಪರವಾಗಿ ಸರ್ಕಾರ ಸ್ಪಂಧಿಸಲಿಲ್ಲ ಎಂದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ. ಸದ್ಯ ಕಬ್ಬಿಣದ ಬೇಲಿ ಹಾಕಲು ೫೦ ಕೋಟಿ ರೂ. ನೀಡಿದ್ದು ಇದು ಹೆಚ್ಚಾಗುವ ಸಾಧ್ಯತೆಯಿದೆ. ಆನೆ ಕಾರಿಡಾರ್‌ಗೆ ಒತ್ತಾಯಿಸಲು ಕೆಲವು ಶಾಸಕರೊಂದಿಗೆ ನಿಯೋಗ ಸಹ ಹೋಗಿದ್ದೆವು. ಆದರೂ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆನೆ ದಾಳಿ ಬಗ್ಗೆ ಆದಷ್ಟು ಎಚ್ಚರದಿಂದಿರಬೇಕು. ಈ ಸಂದರ್ಭ ಜೆಡಿಎಸ್ ತಾ.ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ತಹಸೀಲ್ದಾರ್ ಮೋಹನಕುಮಾರ್, ಅರಣ್ಯ ಇಲಾಖೆಯ ಡಿಎಫ್‌ಒ ನಾಗರಾಜ್, ಆರ್‌ಎಫ್‌ಒ ಯಶ್ಮಾಮಾಚಮ್ಮ ಇತರರು ಇದ್ದರು.