ಹಾಸನ ಸೀಮೆ ನ್ಯೂಸ್ ಬೇಲೂರು :
ಮುಖ್ಯಾಂಶಗಳು.
ಎರಡು ವರ್ಷಗಳ ಬಳಿಕ ಬೇಲೂರಿನಲ್ಲಿ ಜಾತ್ರೆ.
ಬೀಗಿ ಭದ್ರತೆಗೆ ಪೋಲಿಸ್ ಸಜ್ಜು.
ವಸ್ತು ಪ್ರದರ್ಶನ ನಡೆಸಲು ಅವಕಾಶ.
ವಿದ್ಯುತ್ ದೀಪಾಲಂಕಾರ, ಸ್ವಾಗತ ಕಾಮಾನು.
;-ಏಫ್ರಿಲ್ ೫ ರಿಂದ ಏ.೧೮ ವರೆಗೆ ನಡೆಯುವ ವಿಶ್ವ-ವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯನ್ನು ಪಟ್ಟಣದ ಚನ್ನಕೇಶವ ಸಭಾಭವನದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ದೇಗುಲ ಆಡಳಿತಾಧಿಕಾರಿ ಕವಿತಾರಾಜರಾಮ್ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ನೇತೃತ್ವದಲ್ಲಿ ನಡೆಸಲಾಯಿತು.ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ದೇಗುಲದ ಅಡ್ಡೆಗಾರರು,ಪಾಳ್ಯದವರು,ನಾಡ ಪಟೇಲರು,ನಾಡ ಗೌಡರು ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
ಬೇಲೂರು ಚನ್ನಕೇಶವಸ್ವಾಮಿ ದೇಗುಲದ ರಥೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಮಾತನಾಡಿದರು. |
ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕವಿತಾರಾಜರಾಮ್, ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಚನ್ನಕೇಶವಸ್ವಾಮಿ ರಥೋತ್ಸವ ಸ್ಥಗಿತವಾಗಿತ್ತು. ಸದ್ಯ ಕೋವಿಡ್ ಇಳಿಮುಖದಿಂದ ಜಾತ್ರೆ ನಡೆಸಲು ಅವಕಾಶ ಒದಗಿದೆ. ಈ ಕಾರಣದಿಂದ ಅದ್ದೂರಿಯಿಂದ ಕೇಶವ ಜಾತ್ರೆ ನಡೆಸಲು ಸರ್ವರು ಸಹಕಾರ ಅಗತ್ಯವಾಗಿದೆ. ಈಗಾಗಲೇ ಆರೋಗ್ಯ,ಪೋಲಿಸ್, ಸಣ್ಣ ನೀರಾವರಿ, ಲೋಕೋಪಯೋಗಿ,ಪುರಸಭೆ, ತಾಲ್ಲೂಕು ಪಂಚಾಯಿತಿ, ಚೆಸ್ಕಾಂ ಸೇರಿದಂತೆ ಹತ್ತಾರು ಇಲಾಖೆಗಳು ಜಾತ್ರೆ ನಡೆಯುವ ಸಂದರ್ಭದಲ್ಲಿ ಯಾವ ರೀತಿ ಸಹಕಾರ ನೀಡಬೇಕು ಎಂದು ತಿಳಿಸಲಾಗಿದೆ. ಬೇಲೂರಿನ ಸಾಂಸ್ಕೃತಿಕ ಹಿರಿಮೆಯನ್ನು ಇಮ್ಮಡಿಗೊಳಿಸುವ ಹಿನ್ನೆಲೆಯಲ್ಲಿ ರಥೋತ್ಸವ ಸಾಕ್ಷಿಯಾಗಬೇಕಿದೆ. ಪ್ರತಿಯೊಬ್ಬರು ತಮ್ಮ-ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು ದೇಗುಲ ಎಲ್ಲಾ ರೀತಿಯ ವ್ಯವಸ್ಥೆಗೆ ಮುಂದಾಗಬೇಕು ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಬೇಲೂರು-ಹಳೇಬೀಡು ವಿಶ್ವದ ಭೂಪಟದಲ್ಲಿ ತನ್ನದೆಯಾದ ಛಾಪು ಮೂಡಿಸಿದ ಅಲಂಕಾರ ಮತ್ತು ಪ್ರತಿ ರಸ್ತೆಗಳಿಗೆ ಸ್ವಾಗತ ಕಾಮಾನುಗಳನ್ನು ಅಳವಡಿಸುವುದು, ಜಾತ್ರೆಗೆ ಬರುವ ಭಕ್ತರು ವಿಷ್ಣುಕಲ್ಯಾಣಿಯಲ್ಲಿ ಸ್ನಾನಕ್ಕೆ ಸಣ್ಣ ನೀರಾವರಿ ಇಲಾಖೆ ನೀರನ್ನು ಶುದ್ದಗೊಳಿಸಿ, ಸುತ್ತಲು ಸ್ವಚ್ಛತೆ ನಡೆಸಬೇಕಿದೆ. ಜಾತ್ರೆಯ ಸಂದರ್ಭದಲ್ಲಿ ನಿರಂತರವಾಗಿ ಸ್ವಚ್ಛತೆ ನಿರ್ವಹಿಸುವ ಪೌರಕಾರ್ಮಿಕರ ಹೆಸರಿನಲ್ಲಿ ಕೊನೆಯ ದಿನ ವಿಶೇಷ ಪೂಜೆ ಸಲ್ಲಿಸಬೇಕು. ಇನ್ನು ಹೆಚ್ಚಿನ ಸಿದ್ದತೆಗೆ ಮುಂದಿನ ವಾರದಲ್ಲಿ ಸಭೆಯನ್ನು ಕರೆದು ಚೆರ್ಚೆ ನಡೆಸಲಾಗುತ್ತದೆ ಎಂದರು. ಚನ್ನಕೇಶವ ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿ, ಒಟ್ಟು ೧೩ ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಏ.೧೩ ರಂದು ಬ್ರಹ್ಮ ರಥೋತ್ಸವ, ೧೪ ರಂದು ನಾಡ ರಥೋತ್ಸವ ನಡೆಯುವ ದಿನ ಲಕ್ಷಾಂತರ ಜನರು ಸೇರುತ್ತಾರೆ ಎಂದ ಅವರು ಈಗಾಗಲೇ ಎರಡು ವರ್ಷದಿಂದ ಜಾತ್ರೆ ಸ್ಥಗಿತವಾದ ನಿಟ್ಟಿನಲ್ಲಿ ರಥವನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ, ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬಹುತೇಕ ಎಲ್ಲಾ ಇಲಾಖೆಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದಂದರ್ಭದಲ್ಲಿ ತಹಸೀಲ್ದಾರ್ ಮೊಹನಕುಮಾರ್, ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ, ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರ್, ಶ್ರೀನಿವಾಸಭಟ್ಟರ್, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಮುಖ್ಯಾಧಿಕಾರಿ ಸುಜಯಕುಮಾರ್, ಪಿಎಸ್‌ಐ ಶಿವಾನಂದ ಪಾಟೀಲ್, ಆರೋಗ್ಯಾಧಿಕಾರಿ ಡಾ.ವಿಜಯ್, ಪುರಸಭಾ ಸದಸ್ಯರಾದ ಜಿ.ಶಾಂತಕುಮಾರ್, ಜಗದೀಶ್, ಶ್ರೀನಿವಾಸ್, ಅಶೋಕ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
,,,,,,,,,,,,,,,,,,,,,,,,,,,,,,,,,,,,,,,,,
" ಬೇಲೂರಿನ ರಥಕ್ಕೆ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ, ಆದರೆ ರಥದ ಬೃಹತ್ ಚಕ್ರ ಸ್ವಲ್ಪ ಮಟ್ಟಿನ ಅಡೆಚಣೆ ಇರುವ ಕಾರಣದಿಂದ ರಥೋತ್ಸವಕ್ಕೆ ಮುನ್ನವೇ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಅಡ್ಡೆಗಾರರಾದ ಶ್ರೀನಿವಾಸ ಮತ್ತು ವೆಂಕಟೇಶ ಹೇಳಿದರು. "