ಬೆಂಗಳೂರು-ಹಾಸನ ಡೆಮು ರೈಲು ಸಂಚಾರ; ವೇಳಾಪಟ್ಟಿ

ಹಾಸನ: ಹಾಸನ-ಬೆಂಗಳೂರು ನಡುವೆ ನೈಋತ್ಯ ರೈಲ್ವೆ ಮತ್ತೆ ಡೆಮು ರೈಲು ಸಂಚಾರ ಆರಂಭಿಸಲಿದೆ. ಕೋವಿಡ್ ಸಂದರ್ಭದಲ್ಲಿ ಈ ರೈಲಿನ ಸಂಚಾರ ಸ್ಥಗಿತವಾಗಿತ್ತು. ಈಗ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಏಪ್ರಿಲ್ 8ರಿಂದ  ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ.
 ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹಾಸನದ ತನಕ ಡೆಮು ರೈಲು ಕೋವಿಡ್ ಮೊದಲ ಅಲೆಗೆ ಮೊದಲು ಸಂಚಾರ ನಡೆಸುತ್ತಿತ್ತು. ಬಳಿಕ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ನಂತರ ರೈಲು ಸಂಚಾರ ಸ್ಥಗಿತಗೊಂಡಿತ್ತು. 
ಹಾಸನ-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭವಾಗಬೇಕಿದೆ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಉಭಯ ನಗರಗಳ ನಡುವೆ ಇನ್ನೂ ಹೆಚ್ಚಿನ ರೈಲುಗಳ ಸಂಚಾರ ಆರಂಭಿಸಲು ರೈಲು ಇಲಾಖೆ ತೀರ್ಮಾನಿಸಿದೆ. 
 ಬೆಂಗಳೂರು-ಹಾಸನ ನಡುವೆ ಡೆಮು ರೈಲು ಸಂಚಾರ ಏಪ್ರಿಲ್ 8ರಿಂದ  ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ನಿತ್ಯವೂ ಕೆಎಸ್ ಆರ್ ಬೆಂಗಳೂರು (ಮಜೆಸ್ಟಿಕ್)- ಹಾಸನ ನಡುವೆ ಡೆಮು ರೈಲು ಸಂಚಾರ ನಡೆಸಲಿವೆ. ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9.45ಕ್ಕೆ ಹೊರಡುವ ರೈಲು ಯಶವಂತಪುರಕ್ಕೆ 9.57ಕ್ಕೆ ತಲುಪಲಿದೆ. ಅಲ್ಲಿಂದ 9.59ಕ್ಕೆ ಹೊರಟು 1.45ಕ್ಕೆ ಹಾಸನ ತಲುಪಲಿದೆ. ಹಾಸನ ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ನಿಲುಗಡೆ. ಮಧ್ಯಾಹ್ನ 2.15ಕ್ಕೆ ಹಾಸನದಿಂದ ಹೊರಡುವ ರೈಲು ಸಂಜೆ 6 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. 8 ಬೋಗಿಗಳನ್ನು ಹೊಂದಿರುವ ಡೆಮು ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮಾರ್ಗವಾಗಿ ಹಾಸನ ತಲುಪಲಿದೆ. ಈ ಮಾರ್ಗದ ಎಲ್ಲಾ 15 ನಿಲ್ದಾಣಗಳಲ್ಲಿಯೂ ರೈಲಿಗೆ ನಿಲುಗಡೆ ಇದೆ.
ಹಾಸನ-ಚಿಕ್ಕಬಣಾವರ ನಡುವಿನ ರೈಲು ಮಾರ್ಗ ವಿದ್ಯುದೀಕರಣಗೊಂಡರೆ ಈ ಡೆಮು ರೈಲಿಗೆ 16 ಬೋಗಿಗಳನ್ನು ಸಹ ಸೇರಿಸಲು ಅವಕಾಶವಿದೆ. ಆಗ ಇನ್ನೂ ಹೆಚ್ಚಿನ ಜನರು ಪ್ರಯಾಣ ನಡೆಸಲು ಅನುಕೂಲವಾಗಲಿದೆ. ಬೆಂಗಳೂರು ನಗರದಿಂದ ಹಾಸನಕ್ಕೆ ಸರ್ಕಾರಿ, ಖಾಸಗಿ ಬಸ್ ಗಳು ಸಂಚಾರ ನಡೆಸುತ್ತವೆ. ಕೆಎಸ್ಆರ್ ಟಿಸಿಯ ಐಷಾರಾಮಿ ಬಸ್ ಗಳು ಸಹ ಇವೆ. ಆದರೆ ಪ್ರಯಾಣ ದರ ದುಬಾರಿಯಾದ ಕಾರಣ ಜನರು ರೈಲು ಮೊರೆ ಹೋಗಿದ್ದರು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈಗ ಡೆಮು ರೈಲು ಸಂಚಾರ ಪುನಃ ಆರಂಭಗೊಂಡಿದ್ದು, ನೂರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ.

Post a Comment

Previous Post Next Post