ಹಾಸನ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್ ನಲ್ಲಿ ಘೋಷಣೆಯಾಗಿ ಕಾರ್ಯಸಾಧುವಲ್ಲ ಎಂದು ಕೈಬಿಡಲಾಗಿದ್ದ ಶಾಂತಿಗ್ರಾಮ ತಾಲೂಕು ರಚನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಹೊಸ ಪ್ರಸ್ತಾವನೆ ಕಳುಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಸರ್ಕಾರವು ಈ ಹಿಂದಡೆ ಶಾಂತಿಗ್ರಾಮವನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಲು ತೀರ್ಮಾನಿಸಿತ್ತು. ಈ ಹಿಂದೆ ಕೇವಲ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಗಳನ್ನು ಮಾತ್ರ ಶಾಂತಿಗ್ರಾಮ ತಾಲೂಕು ಸ್ಥಾಪನೆಗೆ ಸೇರಿಸುವ ಪ್ರಸ್ತಾಪವಿತ್ತು. ಈಗ ಮೊಸಳೆಹೊಸಳ್ಳಿ ಹಾಗೂ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಗಳನ್ನು ಸೇರಿಸಿ ಶಾಂತಿಗ್ರಾಮ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಒಟ್ಟು ನಾಲ್ಕು ಹೋಬಳಿಗಳಿಂದ 232 ಗ್ರಾಮಗಳು ಮತ್ತು 1.30 ಲಕ್ಷ ಜನಸಂಖ್ಯೆ ವ್ಯಾಪ್ತಿಯು ಶಾಂತಿಗ್ರಾಮ ತಾಲೂಕಿಗೆ ಸೇರಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.