ಹಾಸನ: ಇತ್ತೀಚಿಗೆ ನಡೆದ ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಸಯ್ಯದ್ ಅಫೀಜ್ ಹಾಗೂ ಸಯ್ಯದ್ ಖದೀರ್ ಎಂಬುವವರು ಬಂಧಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಬಸವರಾಜ್, ಪ್ರಾಥಮಿಕ ತನಿಖೆಗಾಗಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ನೈಜ ಆರೋಪಿಗಳಾದ ಸಯ್ಯದ್ ಅಫೀಜ್ ಹಾಗೂ ಸಯ್ಯದ್ ಖದೀರ್ ಅವರು ಹಲವಾರು ದಿನಗಳಿಂದ ಬೇಟೆಯಾಡಲು ತೆರಳುತ್ತಿದ್ದರು ಆ ವೇಳೆ ತಮ್ಮ ಬಂದೂಕಿನ ಸಮೀಪದಿಂದ ಗುಂಡು ಹಾರಿಸಿ ಆನೆಯನ್ನು ಕೊಂದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಾ. ಬಸವರಾಜು ತಿಳಿಸಿದ್ದಾರೆ.
ಆರೋಪಿಗಳು ಮೂಲತಃ ಬೇಲೂರು ತಾಲ್ಲೂಕಿನ ಅರೇಹಳ್ಳಿಯವರಾಗಿದ್ದು, ಹಾಲಿ ಹಾಸನದಲ್ಲಿ ನೆಲೆಸಿದ್ದಾರೆ. ಆಗಿದ್ದಾಂಗೆ ಬೇಟೆಯಾಡುವುದನ್ನು ಇವರು ಹವ್ಯಾಸ ಮಾಡಿಕೊಂಡಿದ್ದರು ಎಂದರು.
ಆನೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಪ್ರವರ್ಗ 1 ರಲ್ಲಿ ಬರುವ ಪ್ರಾಣಿಯಾಗಿದ್ದು ಇವರು ಬೇಟೆಯಲ್ಲಿ ತೊಡಗಿದ್ದರಿಂದ 7 ವರ್ಷ ಜೈಲು ಶಿಕ್ಷೆ ನೀಡುವ ಅವಕಾಶಗಳಿವೆ ಎಂದು ತಿಳಿಸಿದರು.
ಆನೆಗಳ ಸಂರಕ್ಷಣೆಯ ಕುರಿತಂತೆ ಮಾತನಾಡಿದ ಅವರು ಕೊಡಗಿನಿಂದ ಹಾಸನಕ್ಕೆ ಬರುವ ಆನೆಗಳನ್ನು ತಡೆಯುವ ಉದ್ದೇಶದಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅದರಂತೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ಈಗಾಗಲೇ 17 ಕಿ.ಮಿ ರೈಲ್ವೆ ಬ್ಯಾರಿಕೇಡ್ ಕೈಗೊಳ್ಳಲಾಗಿದೆ. ಇನ್ನು 28 ಕಿ.ಮಿ ಗಳ ತಡೆ ಗೋಡೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
2000 ನೇ ಇಸವಿಯಿಂದ ಇದುವರೆಗೆ ಆನೆ ದಾಳಿಯಿಂದ 75 ಮಂದಿ ಮೃತರಾಗಿದ್ದಾರೆ. 64 ಆನೆಗಳನ್ನು ಸ್ಥಳಾಂತರ ಮಾಡಲಾಗಿದ್ದು ಒಟ್ಟಾರೆಯಾಗಿ 24 ಆನೆಗಳು ವಿವಿಧ ಕಾರಣಗಳಿಂದ ಸಾವಿಗೀಡಾಗಿವೆ, ಕಳೆದ ವರ್ಷ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಪರಿಹಾರಕ್ಕಾಗಿ 2.1 ಕೋಟಿ ಹಣವನ್ನು ನೀಡಲಾಗಿದ್ದು, ಈ ವರ್ಷ 57 ಲಕ್ಷ ಹಣವನ್ನು ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅರಸೀಕೆರೆ ಅರಣ್ಯ ವ್ಯಾಪ್ತಿಯಲ್ಲಿ 80 ವರ್ಷದ ವೃದ್ಧ ಮಹಿಳೆ ಶವ ದೊರೆತಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ಪ್ರಾಣಿಯಿಂದ ಜೀವ ಕಳೆದುಕೊಂಡಿಲ್ಲ ಎಂಬುದು ತಿಳಿದು ಬಂದಿದೆ ಎಂದರು.
ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ 8 ದಿನಗಳ ಕಾಲ ಶಾಲಾ ಮಕ್ಕಳಿಗೆ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವನ ಮಹೋತ್ಸವ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು ಬಿರಾದರ್ ಮತ್ತಿತರರು ಹಾಜರಿದ್ದರು
Tags
ಹಾಸನ