ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಹಲವೆಡೆ ಮನೆ ಗೋಡೆಗಳು ಕುಸಿದು ಬಿದ್ದಿವೆ. ಕೆರೆ ಕೋಡಿ ಬಿದ್ದಿದ್ದು, ಬೆಳೆಗಳು ಜಲಾವೃತಗೊಂಡಿವೆ.
ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ದಿನವಿಡೀ ಮಳೆಯಾಗಿದೆ.
ಕೆಲವೆಡೆ ಮನೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೊಳೆನರಸೀಪುರ ತಾಲ್ಲೂಕಿನ ಎಲೆಚಾಗಹಳ್ಳಿ ಗ್ರಾಮದ ವೈ.ಎಂ. ರಾಜಶೇಖರ್ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ.
'ಬೆಳಿಗ್ಗೆ ಉಪಾಹಾರ ಸೇವನೆ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದಿದೆ. ಎರಡು ಕಾಲುಗಳು ಸ್ವಾಧೀನ ಇಲ್ಲ. ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು' ಎಂದು ರಾಜಶೇಖರ್ ಮನವಿ ಮಾಡಿದರು.
ಚನ್ನರಾಯಪಟ್ಟಣ ತಾಲ್ಲೂಕಿನಾದ್ಯಂತ ಮಳೆ ಅಬ್ಬರಿಸಿದ್ದು, ಅನೇಕ ಕೆರೆಗಳು ಕೋಡಿ ಬಿದ್ದಿವೆ. ಕೆಲವೆಡೆ ತೆಂಗು, ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಸಂಪರ್ಕ ಕಲ್ಪಿಸುವ ಹಲವು ಗ್ರಾಮಗಳ ರಸ್ತೆಗಳು ಕೆಸರುಮಯವಾಗಿದೆ.
ಕೋಡಿ ಬಿದ್ದ ಕೆರೆ ನೀರಲ್ಲಿ ಮೀನು ಹಿಡಿಯಲು ಗ್ರಾಮಸ್ಥರು ಮುಗಿಬಿದ್ದ ಘಟನೆಯೂ ನಡೆಯಿತು. ಹಿರೀಸಾವೆ ದೊಡ್ಡ ಕೆರೆಯಲ್ಲಿ ಜನರು ಕೋಡಿ ನೀರಲ್ಲಿ ತೇಲಿ ಬಂದ ಮೀನಿಗಾಗಿ ಬಲೆ ಹಿಡಿದು ಕಾಯುತ್ತಾ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೊಡ್ಡಕೆರೆ ಎರಡೂವರೆ ದಶಕದ ಬಳಿಕ ತುಂಬಿದ್ದು, ಕೆಲವರು ತುಂಬಿದ ಕೆರೆಯಲ್ಲಿ ನೀರಿನಾಟದಲ್ಲಿ ಮಗ್ನರಾಗಿದ್ದರು.
ಹಾಸನದ ಬನಶಂಕರಿ ಬಡಾವಣೆಯ ಕೆಲ ಮನೆಗಳು ಮತ್ತು ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸಿದರು. ಕೆಲ ವಾಹನಗಳೂ ನೀರಿನಲ್ಲಿ ಸಿಲುಕಿದ್ದರಿಂದ ಚಾಲಕರು ಮತ್ತು ಮಾಲೀಕರು ಪರದಾಡಿದರು. ಬಿಟ್ಟು ಬಿಡದೆ ಮಳೆ ಸುರಿದ ಕಾರಣ ಬೆಳಗಿನ ಜಾವ ಚುಮುಚುಮು ಚಳಿ ಹೆಚ್ಚಾಗಿತ್ತು. ಶೀತಗಾಳಿ ಬೀಸುತ್ತಿದ್ದರಿಂದ ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.
ಮಳೆಗಿಂತ ಹೆಚ್ಚಾಗಿ ಶೀತಗಾಳಿ ವೇಗವಾಗಿ ಬೀಸುತ್ತಿರುವ ಪರಿಣಾಮ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೆಟ್, ಸ್ವೆಟರ್ ಹಾಗೂ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಛತ್ರಿಗಳ ಮೊರೆ ಹೋಗಿರುವುದು ಕಂಡುಬಂದಿತು. ವಯೋವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿರುಗಾಳಿ ಸಹಿತ ಮಳೆಗೆ ಬಾಳೆ, ಮಾವು, ಅಡಕೆ, ತರಕಾರಿ ಫಸಲು ಕೈ ಬಿಟ್ಟು ಹೋಗುತ್ತದೆ ಎಂಬ ಭಯದಲ್ಲಿದ್ದಾರೆ ರೈತರು.