"ಹಿರಿಯರ ಮನೆ ಚಿನ್ನಬೆಳ್ಳಿ ಅಂಗಡಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿದೆ" : ವಾಟಾಳ್ ನಾಗರಾಜ್

ಹಾಸನ: "ಹಿರಿಯರ ಮನೆಯಾದ ವಿಧಾನ ಪರಿಷತ್ ಇಂದು ಚಿನ್ನಬೆಳ್ಳಿ ಅಂಗಡಿಯವರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿದೆ" ಎಂದು ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಲ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೬೫ ರಲ್ಲಿ ರಾಜ್ಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ನಾನು ಇಂದಿನವರೆಗೂ ಪಕ್ಷಾಂತರ ಮಾಡದೆ ಕನ್ನಡಪರ -ರಾಜ್ಯದ ಹಿತಕ್ಕಾಗಿ ಹೋರಾಟಗಳನ್ನು ಮಾಡುತ್ತಿದ್ದೇನೆ ಅಂದಿನ ಕಾಲದ ಚುನಾವಣಾ ಸಂದರ್ಭವೇ ಬೇರೆಯಾಗಿದ್ದು ಇಂದು ಕೇವಲ ಹಣ ಮಾಡುವ ದಂಧೆ ಆಗಿದೆ ಎಂದು ದೂರಿದರು. ನಾನು ಐದು ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ ಈ ಬಾರಿ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಕನ್ನಡಪರ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ನನಗೆ ಮತ ನೀಡುವಂತೆ ಮನವಿ ಮಾಡಿದರು.

ಇಂದು ಶಾಸನಸಭೆ- ವಿಧಾನಪರಿಷತ್ ಅಪಾಯದ ಅಂಚಿಗೆ ತಲುಪಿದೆ. ಮೇಲ್ಮನೆ ಎಂಬುದಕ್ಕೆ ಅರ್ಥವೇ ಇಲ್ಲದಂತಾಗಿದ್ದು,  ಹಿಂದೆ ಪರಿಷತ್ ಸದಸ್ಯರಾಗಿದ್ದ ಮಹಾನ್ ನಾಯಕರುಗಳು ಇಂದು ಇಲ್ಲವಾಗಿದ್ದಾರೆ. ಮೇಲ್ಮನೆಯಲ್ಲಿ ಹಲವು ಹಿರಿಯ ನಾಯಕರೊಂದಿಗೆ ನಾನು ಸೇವೆ ಸಲ್ಲಿಸಿದ್ದೇನೆ. ಆದರೆ ಇಂದಿನ ಸ್ಥಿತಿಯೇ ಬೇರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್ ಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಚಿನ್ನ-ಬೆಳ್ಳಿ ಅಂಗಡಿಯವರು ಸದಸ್ಯರಾಗಿ ಬಂದರೆ ಹೇಗೆ ಪದವೀಧರರ, ವಕೀಲರ ಹಾಗೂ ಇತರೆ ವರ್ಗದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಗಳು ಹಣದ ಮೇಲೆಯೇ ನಡೆಯುತ್ತಿದ್ದು ಲಕ್ಷಾಂತರ ರೂ ವ್ಯಹಿಸಿ ಅಧಿಕಾರಕ್ಕೆ ಬರುವ ಸದಸ್ಯರು ಯಾವ ರೀತಿಯ ಉತ್ತಮ ಕೆಲಸ ಮಾಡಲು ಸಾಧ್ಯ,  ಕಳೆದ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡೂವರೆ ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಅವರಿಂದ ಯಾವ ರೀತಿಯ ಅಭಿವೃದ್ಧಿ ಸಾಧ್ಯವಾಗಲಿದೆ . ಕೇವಲ ಒಂದು ಸಾವಿರ ರೂಗಳನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡಲಾಗುತ್ತದೆ ಇದನ್ನು ಹೆಚ್ಚಿಸಬೇಕು ಹಾಗೂ ಪದವೀಧರ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತಹ ಸದಸ್ಯರು ಪರಿಷತ್ತಿಗೆ ಆಯ್ಕೆಯಾಗುವುದು ಉತ್ತಮ ಎಂದು ಸಲಹೆ ನೀಡಿದರು.

Post a Comment

Previous Post Next Post