ಬೇಲೂರು-ಬಿಕ್ಕೂಡು ರಸ್ತೆ ದುರಸ್ತಿಗೆ ಆಗ್ರಹ ! ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ: ಸಚಿವರು-ಶಾಸಕರ ವಿರುದ್ಧ ಆಕ್ರೋಶ

ಬೇಲೂರು: ಬಿಕ್ಕೋಡು-ಸಕಲೇಶಪುರ ರಸ್ತೆ ತೀವ್ರ ಹದೆಗೆಟ್ಟಿದ್ದು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ತಗರೆ, ಕೋಗಿಲೆಮನೆ-ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.


ರಸ್ತೆಯಲ್ಲಿ ಸಂಚಾರ ಕಷ್ಟವಾಗಿದೆ ಮೀತಿಮೀರಿದ ಲೋಡ್ ತುಂಬಿದ ವಾಹನ ಸಂಚಾರದಿಂದ ರಸ್ತೆಪೂರ್ಣ ಗುಂಡಿ ಬಿದ್ದು, ನಿತ್ಯ ಅಪಘಾತ ಸಂಭವಿಸುತ್ತಿವೆ, ಹೀಗಿದ್ದರೂ, ಜಿಲ್ಲಾಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಜಾಣ ಮೌನಕ್ಕೆ ಜಾರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ವಾರದಲ್ಲಿ ರಸ್ತೆಗೆ ಕಾಯಕಲ್ಪ ನೀಡಲು ಮುಂದಾಗದಿದ್ದರೆ ರಸ್ತೆ ತಡೆದು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಈ ವೇಳೆ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಬೋಗ ಮಲ್ಲೇಶ್, ಬೇಲೂರು-ಸಕಲೇಶಪುರ ರಸ್ತೆ ಈ ಭಾಗದ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೂ ಚುನಾಯಿತ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ÷್ಯದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ದೂರಿದರು.

ರಸ್ತೆ ಪೂರ್ಣ ಗುಂಡಿ ಬಿದ್ದಿದ್ದು, ಮಳೆಗಾಲದ ವೇಳೆ ಎಲ್ಲಿ ರಸ್ತೆ ಇದೆ ಎಂದು ಹುಡುಕಬೇಕಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ರೈತರಿಗೆ ತೊಂದರೆಯಾಗಿದೆ.

ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿ ಎಮ್ಮೆ ಚರ್ಮದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಶೀಘ್ರ ಎಚ್ಚೆತ್ತುಕೊಳ್ಳದೇ ಇದ್ದರೆ ಬೃಹತ್ ಹೋರಾಟ ಅನಿವಾರ್ಯ ಎಂದರು.

ಕಾಫಿ ಬೆಳೆಗಾರ ಹಾಗೂ ಬಿಜೆಪಿ ಮುಖಂಡ ಸಂಜುಕೌರಿ ಮಾತನಾಡಿ, ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಹಲವು ಬಾರಿ ಮೌಖಿಕವಾಗಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಧರ್ಮಸ್ಥಳ ಮೊದಲಾದ ಕಡೆಗಳಿಗೆ ತೆರಳುವ ಪ್ರವಾಸಿಗರು ಮತ್ತು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಮೊದಲು ರಸ್ತೆ ಸರಿಪಡಿಸಿ, ಇಲ್ಲವೆ ಹೊಸ ರಸ್ತೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ವಾರ ಪಕ್ಷಾತೀತವಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಅದ್ಧೂರಿ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಭತ್ತದ ವ್ಯಾಪಾರಿ ರಾಜೇಗೌಡ, ವಿನೋದ, ಕೌರಿ ಅರಣ್, ಉಲ್ಲಾಸ್ ತಗರೆ ,  ಮಧು, ಶಶಿಕುಮಾರ್ ಮೊದಲಾದವರಿದ್ದರು.

Post a Comment

Previous Post Next Post