ಆಲೂರು (ಹಾಸನ): ಜೆಡಿಎಸ್ ಪಕ್ಷ 2023ಕ್ಕೆ ರಾಜ್ಯದ ಅಧಿಕಾರದ ಗದ್ದುಗೆ ಏರುವುದು ಕಲ್ಲಿನ ಮೇಲೆ ಬರೆದ ಶಾಸನವಾಗಿದೆ ಎಂದು ಶಾಸಕ ಎಚ್. ಡಿ. ರೇವಣ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಆಲೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2023ರಲ್ಲಿ ಆಲೂರು - ಸಕಲೇಶಪುರ ಕ್ಷೇತ್ರದಲ್ಲಿ ಆನೆ ಕಾರಿಡಾರ್ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲಾಗುವುದು. ಕೊರೊನಾದಂತಹ ಮಹಾಮಾರಿ ರೋಗದಿಂದ ಜೀವವನ್ನು ಉಳಿಸಿಕೊಳ್ಳಲು ರೈತರು ತಮ್ಮಲ್ಲಿದ್ದ ಹಣ, ಒಡವೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಜರ್ಝರಿತರಾಗಿರುವ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆ, ರಸ್ತೆ, ಮನೆ, ತೋಟಗಾರಿಕೆ ಬೆಳೆಗಳು ಹಾಳಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅತಿವೃಷ್ಟಿಯಿಂದ ನಾಶಗೊಂಡಿರುವ ಬೆಳೆ ಹಾಗೂ ಬಿದ್ದ ಮನೆಗಳಿಗೆ ಬಿಜೆಪಿ ಸರಕಾರ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಇವರ ಆಡಳಿತದಲ್ಲಿ ಸುಮಾರು 10 ಬಾರಿ ವಿದ್ಯುತ್ ದರ ಏರಿಸಲಾಗಿದೆ. ಧರ್ಮ, ಜಾತಿ ತಾರತಮ್ಯಕ್ಕೆ ಒಳಗಾಗಿ ಈದ್ಗಾ ಮೈದಾನದಲ್ಲಿ ಗಣಪತಿ ಇಡುತ್ತೇವೆ ಎಂಬುದು ಎಷ್ಟರ ಮಟ್ಟಿಗೆ ಸರಿ. ದೇವೇಗೌಡರ ಆಡಳಿತ ಅವಧಿಯಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.50 ಹಾಗೂ ಸರಕಾರಿ ನೌಕರಿಯಲ್ಲಿ ಶೇ.33 ಮೀಸಲು ಕಲ್ಪಿಸಲಾಯಿತು. ಎಚ್. ಡಿ. ಕುಮಾರಸ್ವಾಮಿ ಆಡಳಿತದಲ್ಲಿ ರೈತರ ಸಾಲ ಮನ್ನಾ ಮಾಡಿರುವುದನ್ನು ಜನತೆ ಮರೆತಿಲ್ಲ ಎಂದರು.
ಶಾಸಕ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಸರಕಾರ ಅವರ ಕ್ಷೇತ್ರದ ಶಾಸಕರಿಗೆ ಹೆಚ್ಚು ಅನುದಾನ ನೀಡಿ ನಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡುವುದರ ಮೂಲಕ ತಾರತಮ್ಯ ಮಾಡುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ನಿತ್ಯ ಕೊಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಅಧಃ ಪತನದ ಹಾದಿ ಹಿಡಿಯುವುದರ ಜತೆಗೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಕೆ. ಹೊಸಕೋಟೆ ಹೋಬಳಿಯನ್ನು ಬರ ಪೀಡಿತ ಹೋಬಳಿಯನ್ನಾಗಿ ಸೇರಿಸಲು ಮನವಿ ಸಲ್ಲಿಸಲಾಗಿದೆ. ಎಂದೂ ಇಲ್ಲದ ಬಾಗಿನ ಅರಿಶಿನ ಕುಂಕುಮ ನೀಡುವ ಸಂಪ್ರದಾಯ ಬಿಜೆಪಿ ನಾಯಕರು ಹಣ ಲೂಟಿ ಮಾಡಿರುವುದರ ಸಂಕೇತವಾಗಿದೆ ಎಂದು ವ್ಯಂಗ್ಯವಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಎಸ್. ಮಂಜೇಗೌಡ, ತಾಪಂ ಮಾಜಿ ಸದಸ್ಯ ಕಾಂತರಾಜು, ಸಿ. ವಿ. ಲಿಂಗರಾಜು, ನಟರಾಜು ನಾಕಲಗೂಡು, ಪ. ಪಂ. ಅಧ್ಯಕ್ಷೆ ವೇದಾ ಸುರೇಶ್, ಬೈರಾಪುರ ಗ್ರಾ. ಪಂ. ಅಧ್ಯಕ್ಷ ರವಿ ಕೆಂಚನಹಳ್ಳಿ, ಕುಂದೂರು ಗ್ರಾ. ಪಂ. ಅಧ್ಯಕ್ಷ ರೂಪೇಶ್, ಪಾಳ್ಯ ಗ್ರಾ. ಪಂ. ಅಧ್ಯಕ್ಷ ಪ್ರಕಾಶ್, ಜೆಡಿಎಸ್ ಮುಖಂಡರಾದ ತೌಫಿಕ್ ಅಹಮ್ಮದ್, ಪಿ. ಎಲ್. ಲಿಂಗ ರಾಜು, ಅಜ್ಜೇಗೌಡ, ಎಂ. ಬಿ. ವಿಜಯ ಕಾಂತ್, ಬಸವರಾಜು ಗೇಕರವಳ್ಳಿ, ರಂಗಸ್ವಾಮಿ ಬಿ. ಕೆ., ವೀರಭದ್ರಸ್ವಾಮಿ ಇತರರು ಹಾಜರಿದ್ದರು.
Tags
ಆಲೂರು