ಹಾಸನ: ಅಪರೂಪದ ವೈದ್ಯರು, ಸಮಾಜ ಸೇವಕರೂ ಆಗಿದ್ದ ಹಿರಿಯ ವೈದ್ಯ ಡಾ. ಗುರುರಾಜ ಹೆಬ್ಬಾರ್(72) ಇಂದು ನಿಧನರಾದರು.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಭಿಮಾನಿ ಬಳಗÀ ಕಳೆದ ಆ.19 ರಂದು ನಗರದ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಹೆಬ್ಬಾರರು ಎಲ್ಲರನ್ನೂ ತೊರೆದಿದ್ದಾರೆ. ಮೃತರ ನಿಧನಕ್ಕೆ ಅಪಾರ ಮಂದಿ ಕಂಬನಿ ಮಿಡಿಸಿದ್ದಾರೆ.
1950 ಜ.1 ರಂದು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ತಾಲೂಕಿನ ಸೋಮೇಶ್ವರದಲ್ಲಿ ಜನಿಸಿದ ಶ್ರೀಯುತರು, ನಂತರ ಹಾಸನಕ್ಕೆ ಬಂದು ಕಟ್ಟಾಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ್ದರು.
ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ, ಆಲೂರು ತಾಲೂಕು ಪಾಳ್ಯದಲ್ಲಿ ಖಾಸಗಿ ಕ್ಲಿನಿಕ್ ತೆರೆದರು.
ಬಳಿಕ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸಲ್ಲಿಸಿದ ಇವರು, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಹಾಸನದಲ್ಲಿ ಖಾಸಗಿ ಕ್ಲಿನಿಕ್ ತೆರೆದು, ತರುವಾಯ ಎಂ.ಜಿ.ರಸ್ತೆಯಲ್ಲಿ ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು.
ಹೆಬ್ಬಾರ್ ಅವರು ಕೇವಲ ವೈದ್ಯರಷ್ಟೇ ಅಲ್ಲ, ಸಮಾಜ ಸೇವಕರಾಗಿ ತಮ್ಮ ತನು ಮನ ಧನ ವ್ಯಯಿಸಿದರು. ಬಡವರ ಬಂಧುವಾಗಿ, ಬಡವರಿಗಾಗಿಯೇ ಹಾಸನದಲ್ಲಿ ಮೊದಲಿಗೆ ಸಹಕಾರಿ ತತ್ವದಡಿ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ನಿಂದ ಸಿ.ಟಿ ಸ್ಕಾö್ಯನ್ ಸೆಂಟರ್ ತೆರೆದರು.
ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮಧೇನು ಸಹಕಾರಿ ವಿದ್ಯಾಶ್ರಮ( ವೃದ್ಧಾಶ್ರಮ), ರೈತ ಬಂಧು ಸಹಕಾರಿ ಸಂಸ್ಥೆ, ಪರಿಪೂರ್ಣ ಚಾರಿಟಬಲ್ ಟ್ರಸ್ಟ್ನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದರು.
ಅಷ್ಟೇ ಅಲ್ಲದೆ ನಂದಗೋಕುಲ ಶಿಶುಕೇಂದ್ರ, ಗೋ ಸಂರಕ್ಷಣೆ, ಪ್ರಾಣಿಹಿಂಸಾ ನಿವಾರಣಾ ಸಂಘ, ಹಾಸನಾಂಬ ಧರ್ಮಛತ್ರ ಹೀಗೆ ನಾನಾ ಸಂಸ್ಥೆಗಳ ಹುಟ್ಟಿಗೆ ಕಾರಣರಾದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀಯುತರು, ಬಡವರು, ದೀನ ದಲಿತರು, ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡಿದ್ದರು.
ಅಸಹಾಯಕರಿಗೆ ಆರ್ಥಿಕ ನೆರವನ್ನೂ ಒದಗಿಸಿದ್ದರು. ಕೊಡುಗೈ ದಾನಿಯಾಗಿ ಕೈ ನೀಡಿ ನೀಡಿದರೇ ಹೊರತು, ಎಂದಿಗೂ, ಯಾರೊಂದಿಗೂ ಕೈ ಚಾಚಿದವರಲ್ಲ. ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯಾತೀತ ವ್ಯಕ್ತಿತ್ವ ಇವರದಾಗಿತ್ತು. ಅಜಾತ ಶತ್ರು ಎಂದೇ ಖ್ಯಾತನಾಮರಾಗಿದ್ದ ಹೆಬ್ಬಾರರು, ಶಿಸ್ತುಬದ್ಧ ಜೀವನ, ಭ್ರಷ್ಟಾಚಾರದ ಕಡುವೈರಿಯಾಗಿದ್ದರು. ಇಂಥ ಅಪರೂಪದ ವ್ಯಕ್ತಿತ್ವದ ವೈದ್ಯರು ಇನ್ನಿಲ್ಲವಾಗಿರುವುದು ಅಪಾರ ಮಂದಿಗೆ ಅತೀವ ನೋವು ತರಿಸಿದೆ.
Tags
ಹಾಸನ