ಹಾಸನ: ನಗರಸಭೆ ಸದಸ್ಯರಾಗಿದ್ದ ಪ್ರಶಾಂತ್ ನಾಗರಾಜ್ ಅವರು ಬದುಕಿದ್ದಾಗ ಸುಳ್ಳು ಎಫ್‌ಐಆರ್ ದಾಖಲು ಮಾಡಿಸಿದ್ದ ಸ್ಥಳೀಯ ಶಾಸಕ ಪ್ರೀತಂಗೌಡ ಅವರು, ಈಗ ಅನುಕಂಪ ತೋರಿಸುತ್ತಿರುವುದು ಕೀಳುಮಟ್ಟದ ರಾಜಕೀಯ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಪ್ರಕಾಶ್ ಟೀಕಾ ಪ್ರಹಾರ ನಡೆಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಪ್ರಶಾಂತ್ ನಾಗರಾಜ್ ಕುಟುಂಬದಿAದ ಯಾರೇ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಅಭ್ಯರ್ಥಿ ಹಾಕದೆ ಬೆಂಬಲ ನೀಡುವುದಾಗಿ ಹೇಳಿರುವುದು ಸೋಲಿನ ಭೀತಿಯಿಂದ ಎಂದು ತಿರುಗೇಟು ನೀಡಿದರು.
ಈ ಹಿಂದೆ ಶಾಸಕರ ಮನೆ ಮೇಲೆ ಕಲ್ಲೆತಸ ಪ್ರಕರಣ ಹಾಗೂ ಉದ್ದೂರು ರಸ್ತೆ ಕಾಮಗಾರಿ ವೇಳೆ ಬಿಜೆಪಿ ಪುಂಡರು ನಡೆಸಿದ್ದ ಗಲಾಟೆಯಲ್ಲಿ ಪ್ರಶಾಂತ್ ನಾಗರಾಜ್ ಅವರ ಪಾತ್ರ ಇಲ್ಲದೇ ಇದ್ದರೂ, ಅವರ ವಿರುದ್ಧ ಎರಡು ಬಾರಿ ಎಫ್‌ಐಆರ್ ಮಾಡಿಸಿದರು ಎಂದು ದೂರಿದರು.
ಕಟ್ಟಿನಕೆರೆ ಮಾರ್ಕೆಟ್ ವ್ಯವಹಾರಕ್ಕೂ ತೊಂದರೆ ನೀಡಿದ್ದರು. ಇದನ್ನು ಪ್ರಶಾಂತ್ ನಾಗರಾಜ್ ಅವರೇ ಹೇಳಿದ್ದರು. ಆದರಿಂದು ದಿಢೀರ್ ಅನುಕಂಪ ತೋರುತ್ತಿರುವ ಶಾಸಕರು, ಪ್ರಶಾಂತ್ ಬದುಕಿದ್ದಾಗ ಏಕೆ ತೋರಲಿಲ್ಲ ಎಂದು ಪ್ರಶ್ನಿಸಿದರು.
ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹೀಗೆಲ್ಲಾ ಹೇಳುತ್ತಿರುವುದು ಕೀಳುಮಟ್ಟದ ರಾಜಕೀಯ ಎಂದು ಜರಿದರು.
ವಿರ‍್ಯಾಸ ಎಂದರೆ ಪ್ರಶಾಂತ್ ಅವರು ಸತ್ತಾಗ ಅವರ ಮುಖ ನೋಡಲು ಬರಲಿಲ್ಲ. ನಮ್ಮ ನಾಯಕರಾದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು, ಸಂಸದ ಪ್ರಜ್ವಲ್, ಸೂರಜ್ ರೇವಣ್ಣ ನಾವೆಲ್ಲರೂ ಮುಂದೆ ನಿಂತು ಎಲ್ಲಾ ಕಾರ್ಯ ಮಾಡಿದೆವು. ಈಗಲೂ, ಮುಂದೆಯೂ ಅವರ ಕುಟುಂಬದ ಜೊತೆ ಇರುತ್ತೇವೆ ಎಂದರು.
ನವೀನ್ ಅವರೇ ಅಭ್ಯರ್ಥಿ:
ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಪ್ರಶಾಂತ್ ಅವರ ಸಹೋದರ ನವೀನ್ ಸ್ಪರ್ಧೆ ಮಾಡಲಿದ್ದಾರೆ. ಶಾಸಕರು ಯಾವುದೇ ಅನುಕಂಪ ತೋರಿಸುವುದು ಬೇಡ. ಅವರೂ ಅಭ್ಯರ್ಥಿ ಹಾಕಲಿ, ನಾವು ನಮ್ಮ ನಾಯಕರು ಹೋರಾಟ ಮಾಡಿ ನವೀನ್ ಅವರನ್ನು ಗೆಲ್ಲಿಸುತ್ತೇವೆ ಎಂದು ಸವಾಲು ಹಾಕಿದರು.
ನವೀನ್ ಅವರೇ ಅಭ್ಯರ್ಥಿಯಾಗಲು ರೇವಣ್ಣ ಸಾಹೇಬ್ರು, ಪ್ರಜ್ವಲ್ ಅವರು ಒಪ್ಪಿದ್ದಾರೆ. ನವೀನ್ ಸಹ ಸಮ್ಮತಿ ಸೂಚಿಸಿದ್ದಾರೆ ಎಂದರು.
ರಾಜ್ ಕುಮಾರ್ ನಗರದಲ್ಲಿ ಹಕ್ಕುಪತ್ರವನ್ನು ಎಲ್ಲರಿಗೂ ಕೊಟ್ಟಿಲ್ಲ, ಆ ಕಾರ್ಯಕ್ರಮಕ್ಕೆ ಪ್ರಶಾಂತ್ ನಾಗರಾಜ್ ಅವರನ್ನು ಕರೆದಿರಲಿಲ್ಲ. ತಮ್ಮ ಕ್ಷೇತ್ರ ಎಂಬ ಕಾರಣಕ್ಕೆ ನಾಗರಾಜ್ ಅವರೇ ಹೋಗಿದ್ದರು ಎಂದು ಸ್ಪಷ್ಟನೆ ನೀಡಿದರು.
ಉಪ ಚುನಾವಣಾ ಅನುಕಂಪ ಕೆಲಸ ಮಾಡಲಿದೆ. ಬಿಜೆಪಿಯವರಿಗೆ ಅಭ್ಯರ್ಥಿ ಇಲ್ಲ, ಹಾಗಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ನವೀನ್ ಅವರು ಪ್ರಶಾಂತ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಹೀಗಾಗಿ ಅವರಿಗೇ ಟಿಕೆಟ್ ನೀಡಲು ನಮ್ಮ ಪಕ್ಷ ತೀರ್ಮಾನ ಮಾಡಿದೆ. ಇದಕ್ಕೆ ಅವರ ಕುಟುಂಬ ಸದಸ್ಯರೂ ಒಪ್ಪಿದ್ದು, ಇಡೀ ಕುಟುಂಬ ಒಗ್ಗಟ್ಟಾಗಿದೆ ಎಂದು ಹೇಳಿದರು. ನವೀನ್, ಪ್ರಶಾಂತ್ ಅವರಂತೆಯೇ ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಮಹೇಶ್, ಗಿರೀಶ್ ಮೊದಲಾದವರಿದ್ದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಸಂಬAಧ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಭವಾನಿ ಮೇಡಂ ಮತ್ತು ನನ್ನದು ತಾಯಿ ಮಗನ ಸಂಬAಧ. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ನಾನು ಪಕ್ಷೇತರವಾಗಿ ನಿಲ್ಲುವ ಅಥವಾ ಬೇರೆ ಪಕ್ಷಕ್ಕೆ ಹೋಗುವ ಯಾವುದೇ ಅಡ್ಡದಾರಿ ರಾಜಕೀಯ ಮಾಡುವುದಿಲ್ಲ.
-ಹೆಚ್.ಎಸ್.ಸ್ವರೂಪ್ ಪ್ರಕಾಶ್, ಜೆಡಿಎಸ್ ಮುಖಂಡ
Tags
ಹಾಸನ