ಚನ್ನರಾಯಪಟ್ಟಣ : ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (16) ಮೃತ.
ಶ್ರವಣಬೆಳಗೊಳ ಹೊರ ವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು.
ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಅದೇ ರೀತಿ ಗುರುವಾರ ಮಳೆಯಾದ ಹಿನ್ನೆಲೆ ಮಳೆ ಗಾಳಿಗೆ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದು, ಅವುಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಮರದ ಮೇಲಿಂದ ತೆಂಗಿನಕಾಯಿಗಳ ಗೊನೆ ಏಕಾಏಕಿ ಈತನ ಮೇಲೆ ಬಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಪ್ರಜ್ವಲ್ ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ಮಗನನ್ನು ಕಳೆದುಕೊಂಡ ಪೋಷಕರ ರೋಧನ ಮುಗಿಲು ಮುಟ್ಟಿತ್ತು. ಈ ಸಂಬ0ಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಚನ್ನರಾಯಪಟ್ಟಣ