ಬೇಲೂರು: ಅಪರಿಚಿತರ ತಂಡವೊಂದು ಇಬ್ಬರು ಯುವಕರ ಮೇಲೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದ ಬಿಜಿಎಸ್ ಕಾಲೇಜು ಬಳಿ ಘಟನೆ ಗುರುವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಬೇಲೂರಿನ ನಿವಾಸಿಗಳಾದ ಅಫ್ತಾಬ್ (19), ಫೈಝ್ (24) ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ಇವರಿಬ್ಬರು ಹಾಸನದಿಂದ ಬೇಲೂರಿಗೆ ಕುದುರೆ ಸವಾರಿ ಮೂಲಕ ಹೋಗುತ್ತಿದ್ದಾಗ ಬಿಜಿಎಸ್ ಕಾಲೇಜು ಬಳಿ ಆರು ಜನರಿದ್ದ ಅಪರಿಚಿತರ ತಂಡವು ದಾಳಿ ನಡೆಸಿ, ಚಾಕುವಿನಿಂದ ಇರಿ ದು ಪರಾರಿಯಾಗಿದೆ ಎನ್ನಲಾಗಿದೆ. ಈ ವಿಷಯ ತಿಳಿದು ಪೋಷಕರು ಘಟನಾ ಸ್ಥಳಕ್ಕೆ ಬಂದು ಯುವಕರನ್ನು ಬೇಲೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಪೈಕಿ ಅಫ್ತಾಬ್ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸುದ್ದಿ ತಿಳಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ.ಎಸ್ಪಿ ತಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಸಂಬಂಧ ಬೇಲೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಚೂರಿ ಇರಿತಕ್ಕೆ ಒಳಗಾಗಿರುವ ಯುವಕರು ನಿತ್ಯ ರಾತ್ರಿ ವೇಳೆ ಗುಂಪುಗಳೊಂದಿಗೆ ಬೇಲೂರಿನಿಂದ ಹಾಸನಕ್ಕೆ ಹಾಗೂ ಹಾಸನದಿಂದ ಬೇಲೂರಿಗೆ ಐದಾರು ಬೈಕ್‌ಗಳಲ್ಲಿ ತಂಡವಾಗಿ ಆಗಮಿಸಿ ಪುಂಡಾಟ ನಡೆಸುತ್ತಿದ್ದರು ಎನ್ನಲಾಗಿದ್ದು ಈ ವೇಳೆಯ ಕಿರಿಕ್ ಗಳೇ ಚೂರಿ ಇರಿತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.