ಭಗವಂತನ ಸ್ವರೂಪವಾದ ಪ್ರಕೃತಿಯ ಆರಾಧನೆಯಿಂದ, ಮನುಕುಲಕ್ಕೆ ಆಯುರಾರೋಗ್ಯಗಳು ಪ್ರಾಪ್ತಿಯಾಗುತ್ತದೆ : ಹೆಚ್.ವಿ.ಸುರೇಶ್‌ಕುಮಾರ್.

ಹೊಳೆನರಸೀಪುರ: ಭಗವಂತನ ಸ್ವರೂಪವಾದ ಪ್ರಕೃತಿಯ ಆರಾಧನೆಯಿಂದ, ಮನುಕುಲಕ್ಕೆ ಆಯುರಾರೋಗ್ಯಗಳು ಪ್ರಾಪ್ತಿಯಾಗುತ್ತದೆ ಎಂದು, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ  ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಾದ ಹೆಚ್.ವಿ.ಸುರೇಶ್‌ಕುಮಾರ್ ಅವರು ತಿಳಿಸಿದರು.


ಅವರು ಇಂದು ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ, ಆರ್ಯವೈಶ್ಯ ಮಂಡಳಿ ವತಿಯಿಂದ, ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸನ್ಮಾನವನ್ನು ಸ್ವೀಕರಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಶತಮಾನವನ್ನು ಪೂರೈಸಿ ನೂತನವಾಗಿ ನಿರ್ಮಾಣವಾಗಿರುವ, ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ, ಪೂಜೆಪುನಸ್ಕಾರಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು,ಅದರಲ್ಲೂ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾಗಿ ಆಕ್ರಾಂತ್ ರವಿಕುಮಾರ್ ಅಧಿಕಾರವನ್ನು ವಹಿಸಿಕೊಂಡ ನಂತರ, ಕೆಲವು ತಿಂಗಳುಗಳಿಂದ ಆರಂಭಿಸಲಾಗಿರುವ, 

ಪ್ರತಿ ಶುಕ್ರವಾದ ಸರದಿ ಪೂಜಾ ಕಾರ್ಯಕ್ರಮ ಮತ್ತು ಅನ್ನ ಪ್ರಸಾದ ವಿನಿಯೋಗದ ಆಚರಣೆಯು, ಇಡೀ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಒಂದು ಮಾದರಿ ಪೂಜಾ ಕಾರ್ಯಕ್ರಮವಾಗಿರುವುದು ಅಭಿನಂದನೀಯ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 

ನಂತರ ಮಾತನಾಡಿದ ಅವರು ಆಮ್ಲಜನಕವೂ ಕಣ್ಣಿಗೆ ಕಾಣುವುದಿಲ್ಲ ಭಗವಂತನೂ ಕಣ್ಣಿಗೆ ಕಾಣುವುದಿಲ್ಲ,ಆದರೇ ಪ್ರಾಣವಾಯು ಮತ್ತು ಭಗವಂತನಿಲ್ಲದೇ ನಾವು ಬದುಕಲಾರೆವು,ಭಕ್ತಿಯಿಂದ ಭಗವಂತನಿಗೆ ಸಮರ್ಪಣೆ ಮಾಡುವ ಹೂವು ಹಣ್ಣುಗಳಿಂದ ಒಬ್ಬ ರೈತನ ಬದುಕು ಹಸನಾಗುತ್ತದೆ ಎಂಬುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ದಿವ್ಯ ಸಂದೇಶವಾಗಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆನರಸೀಪುರ ತಾಲ್ಲೂಕು ಘಟಕದ ಹಾಲಿ ಅಧ್ಯಕ್ಷನಾಗಿ ನಾನು ಕರ್ತವ್ಯವನ್ನು ನಿರ್ವಹಿಸುತ್ತಿದ್ದು,ಇದು ಸೇರಿ ಮೂರನೇ ಬಾರಿಗೆ ನಾನು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯನಾಗಿ ಆಯ್ಕಯಾಗಿದ್ದೇನೆ, ನನಗಿಂತ ಹತ್ತು ವರ್ಷ ಹಿರಿಯರಾದ ಎನ್.ಎಸ್.ರಾಧಾಕೃಷ್ಣ ಅವರು ಪ್ರಸ್ತುತ ಸಂಘದಲ್ಲಿದ್ದಾರೆ, 

ವಿಶ್ರಾಂತ ಪತ್ರಕರ್ತರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಹತ್ತುಸಾವಿರ ರೂಗಳ ಪಿಂಚಣಿಯನ್ನು ನೀಡಲಾಗುತ್ತಿದ್ದು, ಈ ಬಾರಿಯಿಂದ ಹನ್ನೆರಡು ಸಾವಿರ ಮಾಸಿಕ ಪಿಂಚಣಿ ನೀಡಲಾಗುತ್ತಿದೆ, ತಾವು ಮೊದಲ ಬಾರಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾಗ ಪತ್ರಕರ್ತರಾದ ಪ್ರಜಾಮತ ರಾಮಕೃಷ್ಣಯ್ಯ ಅವರಿಗೆ ಮತ್ತು ಸತ್ಯನಾರಾಯಣರಾವ್ ಅವರಿಗೆ ಮಾಸಾಶನ ಕೊಡಿಸಿದ್ದು,ಎರಡನೇ ಬಾರಿ ಸದಸ್ಯರಾಗಿದ್ದಾಗ ಬಾ.ರಾ.ಸು ಮತ್ತು ಗೋಪಿನಾಥ್ ಅವರಿಗೆ ಮಾಸಾಶನ ಕೊಡಿಸಿದ್ದು ,ಈ ಬಾರಿ ಮಂಜುನಾಥ್‌ಗುಪ್ತ ಅವರಿಗೆ ಮಾಸಾಶನ ಕೊಡಿಸುವುದಾಗಿ ತಿಳಿಸಿ, ಪತ್ರಕರ್ತ ಬಂಧುಗಳ ಹಿತವನ್ನು ಕಾಪಾಡುವುದು ತಮ್ಮ ಮೊದಲ ಆಧ್ಯತೆಯಾಗಿದೆ ಎಂದರು. 

ತಮ್ಮನ್ನು ರಾಷ್ಟ್ರೀಯ ಮಟ್ಟದಲ್ಲಿ ಕರ್ತವ್ಯವನ್ನು ನಿರ್ವಹಿಸಲು ಸಹಕಾರವನ್ನು ನೀಡಿ ಬೆಂಬಲಿಸಿದ ಹೊಳೆನರಸೀಪುರದ ಎಲ್ಲಾ ಮಾಧ್ಯಮ ಸಹೋದ್ಯೋಗಿಗಳ ಕೊಡುಗೆಯನ್ನು ಸ್ಮರಿಸಿದರು.ಮತ್ತು ಎಲ್ಲಾ ಮಾಧ್ಯಮ ಮಿತ್ರರ ಪರವಾಗಿ ತಮ್ಮನ್ನು ಸನ್ಮಾನಿಸಿದ ಆರ್ಯವೈಶ್ಯ ಮಂಡಳಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಶ್ರೀಧರ್,ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಆಕ್ರಾಂತ್ ರವಿಕುಮಾರ್,ಉಪಾಧ್ಯಕ್ಷರಾದ ಮುರಳೀಧರ ಗುಪ್ತ,ಮಯೂರ್ ಮಂಜಣ್ಣ,ಕಾರ್ಯದರ್ಶಿ ಹೆಚ್.ಪಿ.ರಮೆಶ್, ಕಾದಲನ್ ಕೃಷ್ಣ,ಎಸ್.ಗೋಕುಲ್,ಕಾಫಿಪುಡಿ ಮಂಜುನಾಥ್ ಗುಪ್ತ, ಮತ್ತು ಇನ್ನಿತರರು ಉಪಸ್ಥಿತರಿದ್ದರು.

ವರದಿ: ವಿಶ್ವಕವಿ ಹೊಳೆನರಸೀಪುರ

Post a Comment

Previous Post Next Post