ಪ್ರಜ್ವಲ್ ರೇವಣ್ಣ ಸಂಸದರಿಗೆ ಎದುರಾಯ್ತಾ ಹಿನ್ನಡೆಯ ಭೀತಿ…?

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ನಾಲ್ಕು ವರ್ಷಗಳ ಕಾಲ ಜನರ ಕೈಗೆ ಸಿಗದೆ, ಇದೀಗ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಜಿಲ್ಲೆಯಾದ್ಯಂತ ದಿನಕ್ಕೆ ಎರಡ್ಮೂರು ಗ್ರಾಮ ಪಂಚಾಯಿತಿಗಳಿಗೆ ತೆರಳಿ ಗ್ರಾಮಸಭೆ ನಡೆಸುತ್ತಿದ್ದಾರೆ.

ಇಷ್ಟು ದಿನ ಸಾರ್ವಜನಿಕರ ಭೇಟಿಗೂ ಸಿಗದೆ, ಸರಿಯಾಗಿ ಸದನಕ್ಕೂ ಹಾಜರಾಗದೆ ತಮ್ಮಷ್ಟಕ್ಕೆ ತಿರುಗಾಡಿಕೊಂಡಿದ್ದ ಸಂಸದರು, ಇದೀಗ ಪ್ರತಿದಿನ ಗ್ರಾಮ ಪಂಚಾಯಿತಿಗೆ ಪ್ರವಾಸ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದು ಕೊಳ್ಳುತ್ತಿರುವುದರಿಂದ ಗಮನಿಸಿದ ಸಂಸದರು ನಿದ್ದೆಯಿಂದ ಎದ್ದಂತೆ ಇದೀಗ ಒಂದೇ ದಿನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


ವಿಧಾನಸಭೆ ಚುನಾವಣೆ ಸಮಯದಲ್ಲಷ್ಟೇ ಸಂಸದರ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ ಅವರು ಸಾರ್ವಜನಿಕ ಅಹವಾಲು ಆಲಿಸುವುದಿರಲಿ, ಸಾರ್ವಜನಿಕರಿಗೆ ದರ್ಶನವೂ ಸಿಗುತ್ತಿರಲಿಲ್ಲ. ಸಂಸದ ನಿವಾಸ ಸುದ್ದಿಗೋಷ್ಠಿ, ರಾಜಕೀಯ ಚರ್ಚೆಗೆ ಮಾತ್ರ ಸೀಮಿತವಾಗಿತ್ತು. ಜಿಲ್ಲೆಯ ಜನರು ಸಮಸ್ಯೆ ಹೇಳಿಕೊಳ್ಳಲು ಸಂಸದರನ್ನು ಎಲ್ಲಿ ಭೇಟಿ ಮಾಡಬೇಕೆಂಬುದೇ ತಿಳಿದಂತಾಗಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಮತಗಳಿಕೆಯಲ್ಲಿ ಏರಿಕೆ ಕಂಡಿರುವುದರಿAದ ಸ್ಪರ್ಧೆಗಿಳಿಯಲು ದಿನಕ್ಕೊಬ್ಬ ಆಕಾಂಕ್ಷಿಗಳಾಗಳು ಹುಟ್ಟಿಕೊಳ್ಳುತ್ತಿದ್ದು, ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸುವ ಮೂಲಕ ಅಭ್ಯರ್ಥಿಯಾಗಲು ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಜ್ಯ ನಾಯಕರು, ಸಚಿವರ ಹಿಂದೆ ಮುಂದೆ ಓಡಾಡಲು ಆರಂಭಿಸಿದ್ದರೆ, 15 ದಿನಗಳ ಹಿಂದೆಯಷ್ಟೇ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಪರಾರ್ಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾನೂ ಆಕಾಂಕ್ಷಿ ಟಿಕೆಟ್ ನೀಡಿದರೆ ಸ್ಪರ್ಧಿಸುವೆ ಎಂಬ ಹೇಳಿಕೆ ನೀಡಿದ್ದರು. ಭಾನುವಾರ ವಿಧಾನ ಪರಿಷತ್ ಮಾಜಿ ಸದಸ್ಯ, ಶ್ರವಣಬೆಳಗೊಳ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ಅವರು ಕೂಡ ನಾನು ಆಕಾಂಕ್ಷಿ, ಪಕ್ಷ ಯಾರಿಗೇ ಟಿಕೆಟ್ ನೀಡುವುದಾದರೂ ಮೊದಲೇ ಘೋಷಣೆ ಮಾಡಬೇಕೆಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆಂಬ ಸುಳಿವು ಸದ್ಯಕ್ಕೆ ದೃಢವಾಗುತ್ತಿಲ್ಲ. ಹೀಗಿರುವಾಗ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಸಂಸದರು ಇದೀಗ ಬಿಡುವಿಲ್ಲದಂತೆ ಓಡಾಟ ಆರಂಭಿಸಿದ್ದಾರೆ.

ಟಿಕೆಟ್ ಕೈ ತಪ್ಪುತ್ತದೆ ಎಂಬ ಇತ್ತೀಚೆಗೆ ಸುದ್ದಿಗಾರರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರು, ನನಗೆ ಟಿಕೆಟ್ ಕೈತಪ್ಪುವ ವಿಚಾರ ಎಲ್ಲೂ ಚರ್ಚೆಗಳಾಗಿಲ್ಲ. ಗಾಳಿ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದ ಯಾವ ಮುಖಂಡರು ಮತ್ತು ವರಿಷ್ಠರು ಈ ಬಗ್ಗೆ ಮಾತನಾಡಿಲ್ಲ ಎನ್ನುವ ಮೂಲಕ ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಏನೇ ಇದ್ದರೂ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಟ್ಟಾರೆ ಮತಗಳಿಕೆಯಲ್ಲಿ ಕುಸಿತ ಕಂಡಿದ್ದು, ಇದು ಸಹಜವಾಗಿ ಜನತಾ ದಳ ನಾಯಕರ ನಿದ್ದೆಗೆಡಿಸಿದೆ. ಚುನಾವಣೆ ಮುಗಿದ ಎರಡು ತಿಂಗಳು ಕಳೆಯುತ್ತ ಬಂದರೂ ಜೆಡಿಎಸ್‌ನ ಯಾವ ನಾಯಕರೂ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೂಡ ವಿಧಾನಸಭೆ ಫಲಿತಾಂಶ ಪ್ರಕಟಗೊಂಡ ಒಂದೂವರೆ ತಿಂಗಳು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ಮುಂದಿನ ಚುನಾವಣೆಗೆ ಸಿದ್ಧರಾಗುತ್ತೇವೆ ಎಂದಷ್ಟೇ ಹೇಳಿದ್ದು, ಪಕ್ಷಕ್ಕೆ ಹಿನ್ನಡೆಯಾದ ಬಗ್ಗೆ ಯಾವ ವಿಷಯವನ್ನು ಪ್ರಸ್ತಾಪ ಮಾಡಲಿಲ್ಲ. ಇನ್ನು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಇದ್ದೂ ಇಲ್ಲದಂತಾಗಿದ್ದಾರೆ. ಸಾರ್ವಜನಿಕರ ಭೇಟಿ ಇರಲಿ, ಸರ್ಕಾರಿ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೂ ಭಾಗವಹಿಸುತ್ತಿಲ್ಲ.

Post a Comment

Previous Post Next Post