ಬೇಲೂರು: ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೇ ಒಂಭತ್ತು ತಿಂಗಳ ಹಸುಗೂಸು ತಾಯಿ ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬೇಲೂರು ಪಟ್ಟಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮದ ನಿವಾಸಿ ಆಶಾ ಎನ್ನುವವರಿಗೆ ಕಳೆದ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ.
ಆಶಾ ಅವರ ಪತಿ ಹಾಸನದಲ್ಲಿದ್ದು, ಸಹೋದರ ಹೊರಗೆ ಹೋಗಿದ್ದರು. ಹೀಗಾಗಿ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಶಾ ಪೋಷಕರು ನಗುಮಗು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು.
ಬೇಲೂರು ಪಟ್ಟಣದಲ್ಲಿದ್ದ ನಗುಮಗು ಆಂಬ್ಯುಲೆನ್ಸ್‌ಗೆ ಎಷ್ಟೇ ಕರೆ ಮಾಡಿದರೂ ಆಂಬ್ಯುಲೆನ್ಸ್ ಸಿಬ್ಬಂದಿ ಕರೆ ಸ್ವೀಕರಿಸಿಲ್ಲ. ಅಷ್ಟರಲ್ಲಾಗಲೇ ಆಶಾ ಅವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೊನೆಗೆ ಬೇರೆ ದಾರಿ ಇಲ್ಲದೇ ಹಾಸನದಲ್ಲಿರುವ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ.
ಹಾಸನದಿಂದ ಆಂಬ್ಯುಲೆನ್ಸ್ ಬರುವುದರೊಳಗೆ ಖಾಸಗಿ ವಾಹನದಲ್ಲಿ ಕರೆ ತಂದು ಆಶಾ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಮಗು ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಆಶಾ ಅವರಿಗೆ ಆಗಸ್ಟ್15 ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಹೀಗಾಗಿ ಮನೆಯಲ್ಲೇ ಇದ್ದರು. ಆದರೆ ತಡರಾತ್ರಿ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಆಂಬ್ಯುಲೆನ್ಸ್ ಚಾಲಕರು ಹಾಗೂ ಬೇಲೂರು ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಬೇಜವಾಬ್ದಾರಿಯಿಂದ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಆರೋಗ್ಯ ಇಲಾಖೆ ವಿರುದ್ಧ ಮಹಿಳೆ ಕುಟುಂಬದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.