ಹಾಸನ: ಶ್ರೀ ಹಾಸನಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅಳವಡಿಸುವುದು ಮತ್ತು ಹಣೆಗೆ ಕುಂಕಮ ಹಚ್ಚಲು ಕುಂಕುಮದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ರಾಷ್ಟ್ರ ರಕ್ಷಣಾ ಸೇನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಜಿಲ್ಲೆಯ ಅದಿದೇವತೆ ಹಾಸನಾಂಬ ದೇವಸ್ಥಾನವು ೧೨ನೇ ಶತಮಾನದ ಅತ್ಯಂತ ಪ್ರಾಚೀನವಾದ ಸಪ್ತಮಾತೃಕೆ ದೇವತೆಗಳ ಶಕ್ತಿ ಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಇದ್ದಾರೆ. ವರ್ಷಕ್ಕೊಮ್ಮೆ ದೀಪಾವಳಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಿಯರ ದರ್ಶನ ಪಡೆಯುತ್ತಾರೆ ಎಂದರು. ಆದರೆ ಇಂದು ಜನರು ಆಧುನಿಕ ಜಗತ್ತಿಗೆ ಮಾರು ಹೋಗಿ, ದೇವರ ದರ್ಶನ ಪಡೆಯುವಾಗ ಪಾಶ್ಚಾತ್ಯ ಅಸಾತ್ವಿಕ ಉಡುಪುಗಳನ್ನು ಧರಿಸುವುದು, ಕೂದಲು ಹರಡಿಕೊಳ್ಳುವುದು, ಅಸಭ್ಯ ವರ್ತನೆ, ಮುಂತಾದ ವಿದೇಶಿ ರೀತಿಯಲ್ಲಿ ಉಡುಪುಗಳ ಧಾರಣೆ ಮತ್ತು ದೇವಸ್ಥಾನಗಳ ಒಳಗೆ ಮೊಬೈಲ್‌ಗಳ ಬಳಕೆ, ಮುಂತಾದ ಧರ್ಮಹಾನಿ ಕೃತಿಗಳಿಂದ ದೇವಸ್ಥಾನದ ಸಾತ್ವಿಕತೆ, ಪಾವಿತ್ರತೆಗೆ ಭಂಗ ಉಂಟಾಗುತ್ತದೆ. ಅದಲ್ಲದೇ ನಿಜವಾದ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ದೂರಿದರು. ಹಾಸನಾಂಭ ದೇವಸ್ಥಾನದಲ್ಲಿ ಸಹ ವಸ್ತ್ರ ಸಂಹಿತೆಯನ್ನು ಅಳವಡಿಸಬೇಕು ಎಂದು ವಿನಂತಿಯನ್ನು ಮಾಡುತ್ತೇವೆ. ಹಾಸನಾಂಬಾ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಕುರಿತಾಗಿ ದೇವಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳ ಮೂಲಕ ಹೆಚ್ಚು ಪ್ರಚಾರ ಈಗಿನಿಂದಲೇ ನೀಡಿದರೆ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಪಾಲನೆ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.
ಸನಾತನ ಹಿಂದೂ ಧರ್ಮದ ಶಾಸ್ತ್ರದಂತೆ ದೇವರ ದರ್ಶನ ಪಡೆಯುವಾಗ ಪುರುಷರು ಶಿವ ದೇವರ ತತ್ವದ ಪ್ರತೀಕವಾಗಿ ಉದ್ದನೇಯ ತಿಲಕವನ್ನು ಇಡಬೇಕು ಮತ್ತು ಸ್ತ್ರೀಯರು ದೇವಿಯ ಪ್ರತೀಕವಾಗಿ ಗೋಲಾಕಾರದ ಕುಂಕುಮವನ್ನು ಹಣೆಯ ಮೇಲೆ ಧರಿಸಬೇಕು. ಹಾಸನದ ಅದಿ ದೇವತೆ ಪವಿತ್ರ ಹಾಸನಾಂಬೆ ದೇವಿಯ ದರ್ಶನ ಪಡೆಯುವರು ದೂರದ ಊರುಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಅನಿವಾರ್ಯತೆಯಿಂದ ಹಣೆಯಲ್ಲಿ ಕುಂಕುಮ ಲಭ್ಯವಿಲ್ಲದೆ ಅನೇಕರು ಹಾಗೆಯೆ ದರ್ಶನ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮಲ್ಲಿ ವಿನಂತಿಸಿ ಕೂಳ್ಳುವುದೇನೆಂದರೆ ಶ್ರೀ ಹಾಸನಾಂಬೆ ದೇವಾಲಯದ ನಿಯಮದಂತೆ ಗರ್ಭಗುಡಿಯ ಬಳಿ, ಸರತಿ ಸಾಲಿನ ಬಳಿ ಕುಂಕುಮ ಬಟ್ಟಲನ್ನು ಇಡುವ ವ್ಯವಸ್ಥೆ ಮಾಡಬೇಕು ಮತ್ತು ಅದರಲ್ಲಿ ಯಾವಾಗಲು ಕುಂಕುಮವಿರುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಕೋರಿದರು.
ಇದೆ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸುಜಾತ ನವೀನ್, ಮುತ್ತುರಾಜು, ಮಿಥುನ್ ಜೈನ್, ರಾಷ್ಟ್ರ ರಕ್ಷಣಾ ಸೇನೆ ಸಂಚಾಲಕ ಸುರೇಶ್ ಗೌಡ, ಕಲಾವತಿ ಇತರರು ಉಪಸ್ಥಿತರಿದ್ದರು.
Tags
ಹಾಸನ