ಶಿವಣ್ಣ ಅವರ ಆರೋಗ್ಯ ಸರಿ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಅವರಿಗೆ ಅಗಿರುವ ಸಮಸ್ಯೆ ಏನು ಎಂಬುದರ ಬಗ್ಗೆ ಹಲವು ಕಥೆಗಳಿವೆಯಾದರೂ, ಶಿವಣ್ಣ ಅದನ್ನು ಹೇಳಿಕೊಂಡಿಲ್ಲ. ಆದರೆ ಅನಾರೋಗ್ಯ ಇರುವುದನ್ನು ಮುಚ್ಚಿಟ್ಟಿಲ್ಲ. ಭೈರತಿ ರಣಗಲ್ ಬಿಡುಗಡೆಗೆ ಮೊದಲೇ ಹಲವು ಸಂದರ್ಶನಗಳಲ್ಲಿ ತಮಗೆ ಅನಾರೋಗ್ಯ ಇದೆ. ಚಿಕಿತ್ಸೆಯಲ್ಲಿದ್ದೇನೆ. ಅದೇ ಕಾರಣಕ್ಕಾಗಿ ಅಭಿಮಾನಿಗಳನ್ನು ಮುಟ್ಟಿಕೊಳ್ಳುತ್ತಿಲ್ಲ. ಅಪ್ಪಿಕೊಳ್ತಾ ಇಲ್ಲ. ಅವರಿಗೆ ಇನ್ಫೆಕ್ಷನ್ ಆದರೆ.. ಎಂದೆಲ್ಲ ಮಾತನಾಡಿದ್ದರು. ಅಮೆರಿಕಕ್ಕೆ ಶಸ್ತ್ರ ಚಿಕಿತ್ಸೆಗಾಗಿ ಹೋಗಬೇಕಿದೆ ಎಂದೂ ಹೇಳಿದ್ದರು ಶಿವಣ್ಣ. ಇದೀಗ ಅಮೆರಿಕಕ್ಕೆ ಹೋಗುವ ದಿನ ಮತ್ತು ಸರ್ಜರಿ ಡೇಟ್ ಫಿಕ್ಸ್ ಆಗಿದೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಡಿಸೆಂಬರ್ 18ಕ್ಕೆ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ. ಶಸ್ತ್ರಚಿಕಿತ್ಸೆ ಬಳಿಕ ಕೆಲ ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರೇ ಈ ಬಗ್ಗೆ ಟಿವಿ ಶೋವೊಂದರಲ್ಲಿ ಮಾಹಿತಿ ನೀಡಿದ್ದು, ಅದಾದ ಬಳಿಕ ಶಿವಣ್ಣ ಕಣ್ಣೀರು ಹಾಕಿದ್ದಾರೆ. ಶಿವಣ್ಣ ಕಣ್ಣೀರು ಹಾಕಿರುವುದನ್ನು ನೋಡಿ ಹಲವರು ಭಾವುಕರಾಗಿದ್ದಾರೆ. ಗುಣಮುಖರಾಗಿ ಬನ್ನಿ ಶಿವಣ್ಣ ಎಂದು ಲಕ್ಷಾಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ.