ಹಾಸನ: ಹೊಳೆನರಸೀಪುರ ರಸ್ತೆಯ ಕಿತ್ತಾನೆ ಗಡಿಯಲ್ಲಿ ೧೫ ದಿನಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ದುರಂತ ಸಾವಿಗೀಡಾದ ಯುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಸಾವನ್ನು ಮರೆಯುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.
ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾತೇನಹಳ್ಳಿ ಗ್ರಾಮದ ಮಂಜೇಗೌಡ (೬೦) ಮೃತ ವ್ಯಕ್ತಿ. ಮಂಜೇಗೌಡ ಸಾತೇನಹಳ್ಳಿ ಗ್ರಾಮದಿಂದ ಕೆಎ-೧೩-ಇಇ-೨೨೭೩ ನಂಬರಿನ ಬೈಕಲ್ಲಿ ಬರುತ್ತಿದ್ದರು.
ಎನ್.ಹೆಚ್ ೩೭೩ ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಕೆಎ-೦೨-ಎಂಇ-೭೫೮೩ ನಂಬರಿನ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗೊರೂರು ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹದಿನೈದು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಕಿತ್ತಾನೆ ಗಡಿ ಬಳಿ ಅಪಘಾತಗಳು ಹೆಚ್ಚುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹಂಪ್ಸ್ ಹಾಗೂ ಸೂಚನಾ ಫಲಕ ಅಳವಡಿಸುವಂತೆ ಒತ್ತಾಯಿಸಿದ್ದಾರೆ.