ಕೋಮುವಾದಿ ಪಕ್ಷದಿಂದ ಹಿಟ್ಲರ್‌ ಮಾದರಿ ಅನುಕರಣೆ: ಬಾನು ಮುಷ್ತಾಕ್‌

 ಹಾಸನ: ‘ಆದಷ್ಟು ಬೇಗ ಜನಗಣತಿಯಾದರೆ, ಅಲ್ಪಸಂಖ್ಯಾತರ ಬಗ್ಗೆ ಇರುವ ತಪ್ಪು ಕಲ್ಪನೆ ದೂರವಾಗುತ್ತದೆ’ ಎಂದು ಪೆನ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.

ನಗರದ ಆರ್‌.ಸಿ. ರಸ್ತೆಯ ಶ್ರಮ ಕಚೇರಿಯಲ್ಲಿ ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಿದ್ದ ತಿಂಗಳ ಮಾತುಕತೆ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು‌.

‘ಅಲ್ಪಸಂಖ್ಯಾತರಲ್ಲಿ, ಅದರಲ್ಲೂ ಮುಸ್ಲಿಂ ಸಮುದಾಯದ ಬಗ್ಗೆ ಹಲವಾರು ಅಪಪ್ರಚಾರವನ್ನು ಮಾಡಲಾಗುತ್ತಿದೆ. ಹೆಚ್ಚು ಮಕ್ಕಳನ್ನು ಹೆತ್ತು ಜನಸಂಖ್ಯೆ ಹೆಚ್ಚಳ ಮಾಡುತ್ತಿದ್ದಾರೆ ಎಂಬ ಬಲಪಂಥೀಯರ ಅಪಪ್ರಚಾರವನ್ನು ನಿಲ್ಲಿಸಬೇಕೆಂದರೆ, ಜನಗಣತಿ ಮಾಡಿ ಸತ್ಯ ತಿಳಿಯಲಿ’ ಎಂದರು.

‘ಮುಸ್ಲಿಂ ಸಮುದಾಯದಲ್ಲಿಯೂ ಜಾಗೃತಿಯ ಅವಶ್ಯಕತೆ ಇದೆ. ಮೂಲಭೂತವಾದದ ಸಂಕೇತಗಳಾದ ಗುರುತುಗಳ ಬಗ್ಗೆ ಎಚ್ಚರದಿಂದ ಇರಬೇಕಿದೆ ಎಂದ ಅವರು, ಟೋಪಿ ಹಾಕದೆಯೂ ಒಬ್ಬ ಪುರುಷ ಇಸ್ಲಾಂ ಪಾಲನೆ ಮಾಡಬಲ್ಲ. ಹಾಗೆಯೇ ಹಿಜಾಬ್ ಧರಿಸದೆಯೇ ಒಬ್ಬ ಮಹಿಳೆ ಇಸ್ಲಾಂ ಪಾಲನೆ ಮಾಡಲು ಏನೂ ಅಡ್ಡಿಯಿಲ್ಲ’ ಎಂದರು.

‘ಮನುಕುಲ ಕಂಡ ಮಹಾನ್ ಕ್ರೂರಿ ಹಿಟ್ಲರ್, ಯಹೂದಿಗಳನ್ನು ಗುರುತಿಸಲು ಹಳದಿ ಬಣ್ಣದ ನಕ್ಷತ್ರ ಆಕೃತಿಯ ಗುರುತನ್ನು ತಮ್ಮ ಉಡುಪಿನ ಮೇಲೆ ಹಾಕಿಕೊಳ್ಳುವಂತೆ ಆಡಳಿತಾತ್ಮಕವಾಗಿ ನಿರ್ದೇಶನ ನೀಡಿದ್ದ. ಈಗ ಅದೇ ರೀತಿಯಾಗಿ ಉತ್ತರ ಭಾರತದ ಕೆಲರಾಜ್ಯಗಳಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಕೇಸರಿ ಬಾವುಟ ಹಾಕಿಕೊಳ್ಳುವಂತೆ ಕೋಮುವಾದಿ ಪಕ್ಷ ಕುಮ್ಮಕ್ಕು ನೀಡುತ್ತಿದೆ’ ಎಂದು ಆರೋಪಿಸಿದರು.

‘ಕೋಮುವಾದಿ ಪಕ್ಷವೊಂದು ಹಿಟ್ಲರ್ ಮಾದರಿಯನ್ನು ಚಾಚೂ ತಪ್ಪದೇ ಪಾಲಿಸುತ್ತಿದೆ. ಹಾಗಾಗಿ ಈಗಿನ ಸಾಹಿತಿಗಳು, ಓದುಗರು ಹಿಟ್ಲರ್ ಕುರಿತಾಗಿ ಹೆಚ್ಚು ಅಧ್ಯಯನ ಮಾಡಿ, ಆಗಬಹುದಾದ ಅನಾಹುತವನ್ನು ತಡೆಯಲು ಪ್ರಯತ್ನಿಸಬೇಕಿದೆ’ ಎಂದರು.

ಹಿಟ್ಲರ್‌ನ ಕಡೆಯ ದಿನದ ದಿನಚರಿಯನ್ನು ವಿವರಿಸಿದ ಅವರು, ಶ್ರೇಷ್ಠತೆಯ ವ್ಯಸನಕ್ಕೆ ತಾನೂ ಬಲಿಯಾಗಿ, ಮನುಕುಲಕ್ಕೂ ಹೇಗೆ ಹಿಟ್ಲರ್ ಮಾರಕವಾಗಿದ್ದ ಎಂಬುದನ್ನು ವಿವರಿಸಿದರು‌.

ಅಧ್ಯಕ್ಷತೆ ವಹಿಸಿದ್ದ ಶ್ರಮ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ‘ಮುಸ್ಲಿಂ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಘ ಪರಿವಾರದ ಹುನ್ನಾರವನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು’ ಎಂದರು.

ಶ್ರಮ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿರು. ಅಹಮದ್ ಹಗರೆ ಅವರು ಬಾನು ಮುಷ್ತಾಕ್ ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ಪೃಥ್ವಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

ಚಿಂತಕರಾದ ಕೆ.ಎಸ್. ರವಿಕುಮಾರ್, ರೋಹಿತ್ ಅಗಸರಹಳ್ಳಿ, ಗುರುರಾಜ್, ಜಯರಾಂ, ಮುಬಾಷಿರ್ ಅಹಮದ್, ಪುಷ್ಪಾ, ಚಲಂ ಹಾಡ್ಲಹಳ್ಳಿ, ಮಲ್ನಾಡ್ ಮೆಹಬೂಬ್, ಪರಮೇಶಿವಯ್ಯ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು.

‘ಮಸೀದಿಗೆ ತೆರಳಿ ನಮಾಜ್‌ಗೆ ಮಹಿಳೆಯರಿಗೂ ಅವಕಾಶ’

ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾನು ಮುಷ್ತಾಕ್‌ ‘ಜಗತ್ತಿನ ಎಲ್ಲ ದೇಶಗಳಲ್ಲೂ ಮಹಿಳೆಯರಿಗೆ ಮಸೀದಿಗೆ ತೆರಳಿ ನಮಾಜ್ ಮಾಡಲು ಅವಕಾಶವಿದೆ. ಮೆಕ್ಕಾ ಮದೀನಾದಂತಹ ಪವಿತ್ರ ಕ್ಷೇತ್ರದಲ್ಲಿ ಖುದ್ದು ನಾನೇ ನಮಾಜ್‌ ಮಾಡಿ ಬಂದಿದ್ದೇನೆ. ಆದರೆ ಕರ್ನಾಟಕ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಈ ಧಾರ್ಮಿಕ ಸ್ವಾತಂತ್ರ್ಯ ನೀಡುವಲ್ಲಿ ಧಾರ್ಮಿಕ ಮುಖಂಡರು ಮೂಲಭೂತವಾದ ಗುಣವನ್ನು ಪ್ರದರ್ಶಿಸುತ್ತಿದ್ದಾರೆ’ ಎಂದರು‌. ‘ಜಗತ್ತಿನ ಯಾವ ಧರ್ಮದಲ್ಲಿಯೂ ವಿವಾಹ ವಿಚ್ಛೇದನ ಕೊಡುವ ಅವಕಾಶವಿಲ್ಲ. ಆದರೆ ಇಸ್ಲಾಂ ಧರ್ಮದಲ್ಲಿ ಮಾತ್ರ ಈ ಅವಕಾಶವಿದೆ. ನಂತರ ಬಹುತೇಕ ಎಲ್ಲ ಧರ್ಮಗಳು ಆಯಾ ದೇಶದ ಕಾನೂನುಗಳು ವಿಚ್ಛೇದನದ ಅಗತ್ಯತೆಯನ್ನು ಮನಗಂಡು ಅಳವಡಿಸಿಕೊಂಡವು’ ಎಂದರು.

Post a Comment

Previous Post Next Post