ಹಾಸನ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಡಿ.೧೪ರ ಶನಿವಾರ ಬೆಳಿಗ್ಗೆ ದಲಿತರ ಮೇಲಿನ ದೌರ್ಜನ್ಯ ತಡೆ ಬಗ್ಗೆ ಕಾನೂನು ಅರಿವು ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಜಿಲ್ಲಾದ್ಯಕ್ಷ ಹೆಚ್.ಎಸ್. ಪ್ರದೀಪ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಪ್ರಸ್ತುತ ದೇಶದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದಿನೇ ದಿನೆ ಅನ್ಯಾಯ, ಅತ್ಯಾಚಾರ ದೌರ್ಜನ್ಯ ನಡೆಯುತ್ತಲೇ ಇವೆ. ಆದರೆ ಈವರೆಗೂ ಯಾವುದಕ್ಕೂ ಕಡಿವಾಣ ಬಿದ್ದಿಲ್ಲ. ಇದಕ್ಕೆ ನಮಗೆ ಕಾನೂನು ಅರಿವು ಇಲ್ಲದಿರುವುದು ಕಾರಣ ಎಂದರು.
ಹಾಗೆಯೇ ಪ್ರತಿನಿತ್ಯ ದಲಿತರ ಮೇಲೂ ಅನ್ಯಾಯ, ಅತ್ಯಾಚಾರ, ದೌರ್ಜನ್ಯ ಕೊಲೆಗಳೂ ದೇಶದಲ್ಲಿ ಒಂದಲ್ಲ ಒಂದು ಕಡೆ ಮರುಕಳಿಸುತ್ತಲೇ ಇವೆ. ಆದರೆ ದಲಿತರ ಮೇಲಿನ ದೌರ್ಜನ್ಯಕ್ಕೆ ಪ್ರತ್ಯೇಕವಾದ ಕಾನೂನು ಜೊತೆಗೆ ಪ್ರತ್ಯೇಕವಾದ ನ್ಯಾಯಾಲಯವೂ ಇದೆ ಎಂದು ಸಮುದಾಯದ ದಲಿತ ಜನರಿಗೆ ತಿಳಿಯದೇ ಇರುವುದು ದುರಂತವೇ ಸರಿ ಎಂದರು.
ಇದಕ್ಕೆ ಕಾರಣ ದಲಿತ ಸಮುದಾಯದ ಜನರಿಗೆ, ಪರಿಶಿಷ್ಟ ಜಾತಿ-ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಬಗ್ಗೆ ಕಾನೂನು ಅರಿವು ಇಲ್ಲದಿರುವುದು. ದಲಿತರ ಮೇಲೆ ದೌರ್ಜನ್ಯಗಳಾದಾಗ ಅದಕ್ಕವರು ಹೇಗೆ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕೆಂಬುದು ತಿಳಿದಿಲ್ಲ. ಹಾಗಾಗಿ ಎಲ್ಲರಿಗೂ ಅರಿವುದು ಮೂಡಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ ಎಂದರು.
ಅದಕ್ಕಾಗಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆ ಹಾಗೂ ಜಿಲ್ಲೆಯ ಎಲ್ಲಾ ದಲಿತಪರ, ಪ್ರಗತಿಪರ ಸಂಘಟನೆಗಳು, ರಾಜ್ಯ ಮುಖಂಡರು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಬಾಬಾ ಸಾಹೇಬರ ಅನುಯಾಯಿಗಳು ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿದ್ದಾರೆ. ಕಾನೂನು ಅರಿವು ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರೂ ಆಗಮಿಸಿ ಕಾರ್ಯಕ್ರ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಭೀಮ್ ಅರ್ಮಿ ಸಂಘಟನೆ ಖಜಾಂಚಿ ಎಂ.ಸಿ. ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ತಾಲೂಕು ಅಧ್ಯಕ್ಷ ಡಿ.ಕೆ. ಹೇಮಂತ್, ಆಲೂರು ತಾಲೂಕು ಅಧಕ್ಷ ಜಗದೀಶ್ ನಿಡನೂರು, ಸಂಚಾಲಕ ಪರಮೇಶ್ ಇದ್ದರು.