ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಎರಡೇ ದಿನವೂ ಮುಂದುವರಿಯಿತು. ಮಂಗಳವಾರ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಡಿಸಿ ಕಚೇರಿ ಎದುರು ಧರಣಿ ನಡೆಸಿದ್ದ ನೂರಾರು ಕಾರ್ಯಕರ್ತೆಯರು, ಅಹೋರಾತ್ರಿ ಧರಣಿ ಮುಂದುವರಿಸಿದ್ದರು.
ಇಂದು ಬೆಳಗ್ಗೆ ಜಿಪಂ ಎದುರು ಪ್ರತಿಭಟನೆ ಮುಂದುವರಿಸಿ, ಕೂಡಲೇ ನಮ್ಮ ಸಮಸ್ಯೆ ಹಾಗೂ ಬೇಡಿಕೆ ಈಡೇರಿಸಬೇಕು. ಅಲ್ಲೀವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುತ್ತಿರುವುದು ತಿಂಗಳಿಗೆ ಕೇವಲ ೧೧ ಸಾವಿರ ಗೌರವಧನ. ಅದನ್ನೂ ವಿಳಂಬ ಮಾಡುತ್ತಿದ್ದು, ಪ್ರತಿ ತಿಂಗಳ ೫ ರೊಳಗೆ ನೀಡಬೇಕು ಎಂದು ಆಗ್ರಹಿಸಿದರು.
೫ ವರ್ಷದಿಂದ ನಿವೃತ್ತಿಯಾಗಿರುವವರಿಗೆ ನಿವೃತ್ತಿ ಹಣ ಪಾವತಿಯಾಗಿಲ್ಲ. ಅದನ್ನು ಕೂಡಲೇ ಕೊಡಬೇಕು. ಜಿಲ್ಲೆಯೊಂದರಲ್ಲೇ ೨ ಸಾವಿರ ಹುದ್ದೆ ಖಾಲಿ ಇದ್ದು, ೬ ತಿಂಗಳಿಗೊಮ್ಮೆ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಪ್ರಭಾರ ಭತ್ಯೆ ಹೆಚ್ಚಿಸಬೇಕು, ಸಾದಿಲ್ವಾರು ಹಣವನ್ನು ೮೩ ರೂ. ನಿಂದ ಹೆಚ್ಚಳ ಮಾಡಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಅನುದಾನ ನೀಡಬೇಕು. ಮೊಟ್ಟೆ ಹಣವನ್ನು ಮುಂಗಡವಾಗಿ ಹಾಕಬೇಕು. ಹಾಲಿ ೫ ತಿಂಗಳ ಮೊಟ್ಟೆ ಹಣ ಬಾಕಿ ಇದೆ. ಇದರಿಂದ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಮೊಟ್ಟೆ ವಿತರಿಸಲು ಆಗುತ್ತಿಲ್ಲ. ಇದರಿಂದ ನಮಗೆ ಹೊರೆಯಾಗಿದೆ ಎಂದು ದೂರಿದರು.
ಮೊದಲೇ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರೂ, ಅಂಗನವಾಡಿ ಫಲಾನುಭವಿಗಳಾದ ಮಕ್ಕಳು ಮತ್ತು ಗರ್ಭಿಣಿಯರಿಗೆ ಕೋಳಿ ಮೊಟ್ಟೆ ವಿತರಿಸಬೇಕೆನ್ನುವುದು ಸರ್ಕಾರದ ಯೋಜನೆ. ಆದರೆ ಈ ಮೊಟ್ಟೆಗಳನ್ನು ಇಲಾಖೆ ಸರಬರಾಜು ಮಾಡುವುದಿಲ್ಲ. ಕಾರ್ಯಕರ್ತೆಯರೇ ಖರೀದಿಸಿ ವಿತರಿಸಬೇಕು. ಇದಕ್ಕೆ ಕಾರ್ಯಕರ್ತೆಯರೇ ಮುಂಗಡವಾಗಿ ತಮ್ಮ ಸ್ವಂತ ಹಣ ಬಳಸಿ ಮೊಟ್ಟೆ ಖರೀದಿಸಿ ವಿತರಿಸಬೇಕು. ಹಾಗಾಗಿ ಮುಂಗಡವಾಗಿ ಹಣ ನೀಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು, ಸರ್ಕಾರ ಯಾವ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳದೆ ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊರಿಸುವ ಪ್ರವೃತ್ತಿ ಮುಂದುವರೆದಿದೆ. ಇದು ನಿಲ್ಲಬೇಕು, ನಾವು ಕಳೆದ ಒಂದೂವರೆ ವರ್ಷದಿಂದ ಅಂಗನವಾಡಿಗಳಿಗೆ ಬಾಡಿಗೆ ಹಣ ಪಾವತಿಸಿಲ್ಲ. ಇದರಿಂದ ಬಾಡಿಗೆಯವರು ಕಿರುಕುಳ ಕೊಡುತ್ತಾರೆ. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ, ಪಾಠೋಪಕರಣ, ಆಲ್ಮೇರಾ, ಟೇಬಲ್, ಕುರ್ಚಿಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ಯಾಸ್ ಸ್ಟೌವ್ ಮತ್ತು ಪೈಪ್‌ಗಳನ್ನು ಬದಲಾವಣೆ ಮಾಡಿಕೊಡಬೇಕು. ಮೂರು ವರ್ಷಗಳಿಂದ ಬಾಕಿ ಇರುವ ಮಾರ್ತೃ ವಂದನಾ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಎಂ.ಬಿ.ಪುಷ್ಪ, ಜಖಾಂಚಿ ಶೈಲಜಾ, ಕಾರ್ಯದರ್ಶಿ ಮಂಜುಳಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಹೆಚ್.ಆರ್.ನವೀನ್ ಕುಮಾರ್, ಅರವಿಂದ, ರಾಜು ಮೊದಲಾದವರು ಭಾಗಿಯಾಗಿದ್ದರು.