ಪ್ರಸ್ತುತ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ: ರವಿನಾಕಲಗೂಡು

  ಹಾಸನ : ಪ್ರಸ್ತೂತದಲ್ಲಿ ಆಹಾರ ಪದ್ಧತಿ ವಿಚಾರಕ್ಕೆ ಬಂದರೇ ಸಾಕಷ್ಟು ಬದಲಾವಣೆಗಳಾಗಿದ್ದು, ಯುವ ಪೀಳಿಗೆ ಆರೋಗ್ಯಕರ ಆಹಾರ ಉಪಯೋಗಿಸುವುದಕ್ಕಿಂತ ಜಂಕ್‌ಫುಡ್‌ಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಆತಂಕ ವ್ಯಕ್ತಪಡಿಸಿದರು.

ನಗರದ ಎವಿಕೆ ಪಿಯು ಕಾಲೇಜಿನಲ್ಲಿ ಸೋಮವಾರದಂದು ಆಯೋಜಿಸಿದ್ದ ಫುಡ್‌ಫೆಸ್ಟ್ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ‍್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಆಹಾರದ ಬಗ್ಗೆ ಕೌಶಲ್ಯ ತರಬೇತಿ ಸಿಗಲಿದೆ. ಹಿಂದಿನ ಕಾಲದಲ್ಲಿ ಆರೋಗ್ಯಕರ ಮತ್ತು ಮನಸ್ಸಿಗೆ ಮುದ ನೀಡುವಂತಹ ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಆದರೆ ಈಗ ಆನ್‌ಲೈನ್ ಮತ್ತು ನಾಲಿಗೆಗೆ ರುಚಿ ನೀಡುವ ಮಸಾಲ ಪದಾರ್ಥಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಿವಿಮಾತು ಹೇಳಿದರು. ಯುವತಿಯರು ಮನೆಯಲ್ಲಿ ತಾವೇ ಅಡುಗೆ ಮಾಡುವುದನ್ನು ಕಲಿಯಬೇಕು. ಇದರಿಂದ ತಮ್ಮ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ ಮತ್ತು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಲಿದೆ. ಆದ್ದರಿಂದ ಈಗಿನಿಂದಲೇ ಅಮ್ಮನ ಸಹಾಯದಿಂದ ಅಡುಗೆ ತರಬೇತಿಯನ್ನು ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಸಾಕಷ್ಟು ಸಂಸಾರಗಳು ಒಡೆದು ಹೋಗಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ ಎಂದು ಸಲಹೆ ನೀಡಿದರು. ಎವಿಕೆ ಕಾಲೇಜಿಗೆ ತನ್ನದೇ ಆದ ಇತಿಹಾಸ ಇದ್ದು, ಇಲ್ಲಿ ಈ ಹಿಂದೆ ದಾಖಲಾತಿಯಾಗಲು ಸಾಕಷ್ಟು ಪರಿಶ್ರಮದ ಜೊತೆಗೆ ಗಣ್ಯರ ಶಿಫಾರಸ್ಸು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಕಾಲೇಜು ತನ್ನದೇ ಆದ ಗಟ್ಟಿತನವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಪ್ರಾಂಶುಪಾಲರಾದ ಚಂದ್ರಶೇಖರ್ ಮತ್ತು ಅವರ ಸಿಬ್ಬಂದಿ ವರ್ಗದವರ ಶ್ರಮ ಸಾಕಷ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇಲೂರಿನ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರೇವಣ್ಣ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಗುರಿಯನ್ನಿಟ್ಟುಕೊಂಡು ಅದನ್ನು ಮುಟ್ಟುವವರೆಗೂ ಶ್ರಮವಹಿಸಿದರೆ ಯಶಸ್ಸು ಲಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಕ ಪ್ರಮುಖ ಪಾತ್ರ ವಹಿಸುತ್ತಿಲ್ಲ. ತಮ್ಮ ಜ್ಞಾನಾರ್ಜನೆ, ತಿಳಿವಳಿಕೆ ಎಷ್ಟಿದೆ ಎಂಬುದು ಪ್ರಮುಖವಾಗುತ್ತದೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು,

ಈ ಕಾಲೇಜಿನಲ್ಲಿ ಕಲಿಯುತ್ತಿರುವ ನೀವೇ ಧನ್ಯರು. ಇಲ್ಲಿಯ ಶಿಕ್ಷಣ, ವಾತಾವರಣ, ಉತ್ತಮ ಶಿಕ್ಷಕ ವೃಂದದವರು ಇರುವುದರಿಂದ ಗುಣಮಟ್ಟದ ಶಿಕ್ಷಣ ನಿಮಗೆ ಸಿಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಏನನನ್ನಾದರೂ ಸಾಧಿಸಬೇಕು. ಆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿರಲಿ ಎಂದು ಕಿವಿಮಾತು ಹೇಳಿದರು.

ಮೊಬೈಲ್‌ನಿಂದ ಸಾಕಷ್ಟು ಕ್ರೈಂಗಳು ಹೆಚ್ಚಾಗಿದ್ದು, ಇದರ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣದಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತಿವೆ. ಅಪಾರಧ ಪ್ರಕರಣಗಳಿಗಿಂತ ಸೈಬರ್ ಕ್ರೈಂಗಳೇ ಹೆಚ್ಚಾಗಿ ಬರತೊಡಗಿವೆ ಎಂದು ಹೇಳಿದರು.


ರಾಯಲ್ ಅಪೋಲೋ ಶಾಲೆಯ ಪ್ರಾಂಶುಪಾಲೆ ವಿ. ದೇವಿಕಾ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವಂತಹ ಶಕ್ತಿ ಯುವ ಪೀಳಿಗೆಯಲ್ಲಿದೆ. ಆದರೆ ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಅದರಲ್ಲಿ ನಮ್ಮ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯಲ್ಲೂ ಕೂಡ ಬದಲಾಗುತ್ತಿದೆ. ಆರೋಗ್ಯಕರ ಆಹಾರಕ್ಕಿಂತ ಜಂಕ್‌ಫುಡ್‌ಗಳಿಗೆ ಮಾರು ಹೋಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಫುಡ್‌ಫೆಸ್ಟ್ ಆಯೋಜನೆ ಮಾಡುವ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಆಹಾರದ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕೇವಲ ಪಾಠ ಪ್ರವಚನಗಳಿಗೆ ಸೀಮಿತವಾಗದೆ, ಅವರಿಗೆ ಜೀವನದ ಪಾಠವನ್ನು ಕಲಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಉಪನ್ಯಾಸಕರಾದ ಸುನಿಲ್‌ಕುಮಾರ್, ಮುರುಳಿ, ಮಂಜೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post